ಬೆಂಗಳೂರು: ಟ್ವೀಟ್ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ರಾಕೇಶ್ ವಿರುದ್ಧ ಬಿಜೆಪಿ ಮಾಡಿರುವ ಅವಹೇಳನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಅವರು, ಕಾಲವಾದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದು ಹಿಂದೂ ಸಂಸ್ಕೃತಿ ಹೇಳುತ್ತದೆ. ಹಿಂದೂ ವಿರೋಧಿಗಳು ಎಂದು ಆರೋಪಿಸುತ್ತಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಬಿಜೆಪಿಯವರು ಈಗ ಮಾಡುತ್ತಿರುವುದು ಏನು? ನೈತಿಕವಾಗಿ ದಿವಾಳಿಯಾಗಿರುವ ಬಿಜೆಪಿ, ಬಿಟ್ಕಾಯಿನ್ ಹಗರಣದಲ್ಲಿ ಕಮಲ ದಳಗಳು ಉದುರುವುದನ್ನು ತಪ್ಪಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರನ ಕುರಿತು ಮಾತನಾಡತೊಡಗಿದೆ. ಸಂಸ್ಕೃತಿ-ಸಂಸ್ಕಾರ ಎಂದು ಬೊಬ್ಬೆ ಹಾಕುವ ಕೂಗುಮಾರಿಗಳ ಯೋಗ್ಯತೆ ಬಟಾಬಯಲಾಗುತ್ತಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಪುತ್ರ ರಾಕೇಶ್ ಹೆಸರು ಪ್ರಸ್ತಾಪಿಸಿದ ಬಿಜೆಪಿ ವಿರುದ್ಧ ಡಿಕೆಶಿ ಕಿಡಿ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಬಿಜೆಪಿಯ ಟ್ವೀಟ್ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರೇ ಸ್ವತಃ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದು, ನನ್ನ ಮಗ ರಾಕೇಶ್ ನಮ್ಮನಗಲಿ ಐದು ವರ್ಷಗಳಾಗಿವೆ. ಪುತ್ರಶೋಕ ನಿರಂತರ. ತನ್ನ ಮೇಲಿನ ಆರೋಪಕ್ಕೆ ಆತ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ರಾಜ್ಯ ಬಿಜೆಪಿ ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು ಅತ್ಯಂತ ವೈಯಕ್ತಿಕ ಮತ್ತು ಕ್ಷುಲಕತನದ ರಾಜಕಾರಣ ಎಂದಿದ್ದಾರೆ.
ರಾಕೇಶ್ ಜೊತೆಗೆ ಬಿಟ್ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಹಾಗಿದ್ದರೆ 2018ರಲ್ಲಿ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪ್ರಧಾನಿ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು? ಎಂದು ಕೇಳಿದ್ದಾರೆ.