ಬೆಂಗಳೂರು:ಆರ್.ಆರ್. ನಗರದಲ್ಲಿ ಒಕ್ಕಲಿಗರ ಸಂಘ ಸಂಸ್ಥೆಗಳ ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಸಿಎಂ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದರು.
ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಬೇರೆ ಜಾತಿಯಲ್ಲಿರುವ ಒಗ್ಗಟ್ಟು ನಮ್ಮ ಜಾತಿಯಲ್ಲಿ ಇಲ್ಲ. ಇದನ್ನು ಯಾರು ಬಹಿರಂಗವಾಗಿ ಹೇಳುವುದಕ್ಕೆ ಸಾಧ್ಯವಾಗ್ತಿಲ್ಲ. ನಮ್ಮದು ದೊಡ್ಡ ಸಮುದಾಯ ಆದರೂ ಸರಿಯಾಗಿ ಸಂಘಟನೆಯಾಗಿಲ್ಲ. ನಮ್ಮ ಸಮುದಾಯದ ನಾಯಕರು ಮೂರೂ ಪಕ್ಷದಳಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಾತಾವರಣ ಈಗ ಇದೆ. ನಾವೆಲ್ಲರೂ ಅವರ ಪರವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಮೂರು ಪಕ್ಷಗಳಲ್ಲಿನ ಒಕ್ಕಲಿಗ ನಾಯಕರು ಸಾಂಪ್ರದಾಯಿಕ ವೈರಿಗಳಾಗಿದ್ದಾರೆ. ಬೇರೆ ಸಮುದಾಯದವರೂ ಬೇರೆ ಪಕ್ಷದಲ್ಲಿದ್ದರೂ ಸಿಎಂ, ಸಚಿವರಾಗುತ್ತಾರೆ ಅಂದ್ರೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಆದರೆ, ನಮ್ಮ ಸಮುದಾಯದಲ್ಲಿ ಈ ಬೆಳವಣಿಗೆ ಇಲ್ಲ. ಒಕ್ಕಲಿಗ ಸಮುದಾಯಕ್ಕೆ ಸ್ವಾಭಿಮಾನ ಇಲ್ವಾ?. ಬೇರೆ ಪಕ್ಷದ ನಾಯಕರಿಗೆ ಅವಕಾಶ ಸಿಕ್ಕಿದ್ರೆ, ನಾವೆಲ್ಲರೂ ಅವರ ಪರವಾಗಿ ನಿಲ್ಲೋಣ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಕ್ಕಲಿಗರು ಸ್ಪರ್ಧಿಸಿದ್ದಾರೆ. ಯಾರನ್ನು ಗೆಲ್ಲಿಸಿದ್ರೆ ನಮ್ಮ ಸಮುದಾಯಕ್ಕೆ ಅನುಕೂಲ ಆಗುತ್ತೆ ಅನ್ನೋದು ನೆನಪಿರಲಿ. ಡಿ.ಕೆ. ಶಿವಕುಮಾರ್ ಮುಳ್ಳಿನ ಹಾಸಿಗೆ ಮೇಲೆ ನಿಂತಿದ್ದಾರೆ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷರಾದವರೂ ಮುಖ್ಯಮಂತ್ರಿಯಾಗುವ ವಾಡಿಕೆ ಇದೆ. ಈಗ ನಮ್ಮ ಸಮುದಾಯಕ್ಕೆ ಅವಕಾಶ ಬಂದಿದೆ. ಅದನ್ನು ನಾವು ಬಳಸಿಕೊಳ್ಳಬೇಕು ಎಂದರು.