ಬೆಂಗಳೂರು:ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನದ ನಂತರ, ರಾಜ್ಯ ಕಾಂಗ್ರೆಸ್ ಎಚ್ಚೆತ್ತುಕೊಂಡು ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಈ ಬಗ್ಗೆ ಹಲವು ಸಿದ್ಧತೆ ಕೈಗೊಳ್ಳಲು ತೀರ್ಮಾನಿಸಿದೆ.
ಒಂದೆಡೆ ಪಕ್ಷದ ಅಧ್ಯಕ್ಷರಾಗಿ ಎರಡೂವರೆ ವರ್ಷ ಹಾಗೂ ಅಧಿಕೃತ ಪದಗ್ರಹಣ ಮಾಡಿ ಎರಡು ವರ್ಷ ಕಳೆಯುತ್ತಾ ಬಂದಿದ್ದು, 2023ರ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ, ಪಕ್ಷ ಸಂಘಟನೆಗೆ ಒತ್ತು ನೀಡಬೇಕಾದ ಅನಿವಾರ್ಯತೆ ಡಿಕೆಶಿಗೆ ಎದುರಾಗಿದೆ. ಪಂಚರಾಜ್ಯ ಚುನಾವಣೆ ಸೋಲಿನ ಆತಂಕವನ್ನು ಮುಂದಿಟ್ಟುಕೊಂಡು ಪಕ್ಷದ ವರಿಷ್ಠರ ಭೇಟಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶತಾಯ ಗತಾಯ ಈ ಸಾರಿ ಕೆಪಿಸಿಸಿ ವಿವಿಧ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳ ನೇಮಕ ಪಟ್ಟಿಗೆ ಹೈಕಮಾಂಡ್ ನಾಯಕರಿಂದ ಅಂತಿಮ ಮುದ್ರೆ ಹಾಕಿಸಿಕೊಂಡೆ ಬರಲು ತೀರ್ಮಾನಿಸಿದ್ದಾರೆ. ಬರೋಬ್ಬರಿ 300 ಮಂದಿಯ ಹೆಸರನ್ನು ಒಳಗೊಂಡ ಬೃಹತ್ ಪಟ್ಟಿಯೊಂದಿಗೆ ದಿಲ್ಲಿಗೆ ತೆರಳಿರುವ ಡಿಕೆಶಿ ಈ ಮೂಲಕ ಪಕ್ಷ ಸಂಘಟನೆ, ನಾಯಕರಿಗೆ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದಾರೆ.
ಪಕ್ಷದ ಸದಸ್ಯತ್ವ ನೋಂದಣಿ, ಯುವ ಕಾಂಗ್ರೆಸ್, ಮಹಿಳಾ ಮತ್ತು ಇತರೆ ವಿಭಾಗಗಳ ಬಲವರ್ಧನೆಗೆ ಕಾರ್ಯಯೋಜನೆ ರೂಪಿಸುತ್ತಿರುವ ಡಿಕೆಶಿ ಸದ್ಯ ದಿಲ್ಲಿಗೆ ತೆರಳಿದ್ದು, ಸೋಮವಾರ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಾವು ತೆಗೆದುಕೊಂಡು ಹೋಗಿರುವ ಕೆಪಿಸಿಸಿ ಪದಾಧಿಕಾರಿಗಳ ನೇಮಕ ಪಟ್ಟಿಗೆ ಅಂತಿಮ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿರುವ, ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಸಂದರ್ಭ ಪಕ್ಷದ ಬಲವಾಗಿ ನಿಂತು ಜನರನ್ನು ಸಂಘಟಿಸಿರುವ, ಅಚ್ಚುಕಟ್ಟಾಗಿ ಪಾದಯಾತ್ರೆ ನಡೆಸಿಕೊಂಡು ಸಾಗಿರುವ ನಾಯಕರಿಗೆ ಆದ್ಯತೆ ನೀಡಿ ಪಟ್ಟಿ ಸಿದ್ಧಪಡಿಸಿಕೊಂಡು ಡಿಕೆಶಿ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಯುವ ತಂಡವನ್ನು ಕಟ್ಟುವ ಜತೆಗೆ ಹಿರಿಯರ ಮಾರ್ಗದರ್ಶನವನ್ನೂ ನೀಡಲು ಅನುಕೂಲವಾಗುವ ರೀತಿ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.