ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಪಕ್ಷದ ವತಿಯಿಂದ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತಾಗಿ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು.
ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಕೃಷ್ಣಬೈರೇಗೌಡ, ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ನಾರಾಯಣಸ್ವಾಮಿ ಹಾಗೂ ಹಲವು ನಾಯಕರ ಜತೆ ಚರ್ಚೆ ನಡೆಸಿದ ನಂತರ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸೋಂಕಿತರಿಗೆ ಪಕ್ಷ ಯಾವ ರೀತಿ ನೆರವಾಗಬಹುದು ಎಂದು ಕೆಪಿಸಿಸಿ ವೈದ್ಯರ ಘಟಕದ ಜತೆ ಸಮಾಲೋಚನೆ ನಡೆಸಿದರು.
ಇಂದಿನ ಸಭೆಯಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಪ್ರತಿಪಕ್ಷದ ಜವಾಬ್ದಾರಿ ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡುವ ನಿಟ್ಟಿನಲ್ಲಿ ಹಲವು ವಿಧದಲ್ಲಿ ಚರ್ಚೆ ನಡೆಯಿತು.
ಕೆಪಿಸಿಸಿ ಕಚೇರಿ ಲಾಕ್ಡೌನ್ ತೆರವು
ಕೆಪಿಸಿಸಿ ಕಚೇರಿಯ 5 ಮಂದಿ ಸಿಬ್ಬಂದಿ, ಶಾಸಕ ಹಾಗೂ ವಿಧಾನಸಭೆ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಅವರಿಗೆ ಸೋಂಕು ತಗುಲಿದ್ದ ಹಿನ್ನೆಲೆ ಸೀಲ್ ಡೌನ್ ಆಗಿದ್ದ ಕೆಪಿಸಿಸಿ ಕಚೇರಿ ಇಂದು ಮುಕ್ತವಾಗಿದೆ.
ಸ್ಯಾನಿಟೈಸ್ ಮಾಡಬೇಕಿದ್ದ ಹಿನ್ನೆಲೆ ಮೂರು ದಿನ ಅವಧಿಗೆ ಶುಕ್ರವಾರ ಕಚೇರಿ ಮುಚ್ಚಲಾಗಿತ್ತು. ಇಂದು ಎಂದಿನಂತೆ ಕಚೇರಿ ಬಾಗಿಲು ತೆರೆಯಲಾಗಿದ್ದು, ಚಟುವಟಿಕೆ ನಿತ್ಯದಂತೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರು ಸಭೆ ಕೂಡ ನಡೆಸಿದ್ದಾರೆ.
ಸಿದ್ದರಾಮಯ್ಯ ಗೈರು
ಕೊರೊನಾ ಮಹಾಮಾರಿಗೆ ವಯೋ ಸಹಜವಾಗಿ ಹೆದರಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಾರದ ಹಿನ್ನೆಲೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಬೇಕಿದ್ದ ಹಿರಿಯ ನಾಯಕರ ಸಭೆ ರದ್ದಾಯಿತು.
ವಿವಿಧ ನಾಯಕರನ್ನು ಸೇರಿಸಿ ಸಭೆ ನಡೆಸಲು ಡಿಕೆಶಿ ತೀರ್ಮಾನಿಸಿ ಪ್ರಕಟಣೆ ಹೊರಡಿಸಿದ್ದರು. ಆದರೆ ಸಿದ್ದರಾಮಯ್ಯ ನಗರದಲ್ಲಿ ಇದ್ದರೂ ಸಹ ಸಭೆಗೆ ಆಗಮಿಸಲಿಲ್ಲ. ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಆತಂಕಕ್ಕೆ ಒಳಗಾಗಿರುವ ಅವರು, 15 ದಿನಗಳ ಹಿಂದೆಯೇ ತಮ್ಮ ಮನೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದರು.
ಪಕ್ಷದ ಐವರು ಶಾಸಕರಿಗೆ ಕೊರೊನಾ ವಕ್ಕರಿಸಿದ ಹಿನ್ನೆಲೆ ಜತೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಇವರ ಆಪ್ತವಾಗಿ ಸೋಂಕಿತರು ಓಡಾಡಿದ್ದ ಕಾರಣ ರೋಗದ ಆತಂಕಕ್ಕೆ ಒಳಗಾಗಿರುವ ಸಿದ್ದರಾಮಯ್ಯ, ಇಂದಿನ ಸಭೆಗೆ ಬರಲಿಲ್ಲ ಎಂದು ಹೇಳಲಾಗುತ್ತಿದೆ.