ಬೆಂಗಳೂರು: ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ನಿನ್ನೆ ರಾತ್ರಿ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಖಂಡರ ಜತೆ ಸಮಾಲೋಚನೆ ನಡೆಸಿದರು.
ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಧೃವನಾರಾಯಣ್, ಮಾಜಿ ಸಚಿವರಾದ ಕೆ.ಬಿ.ಕೋಳಿವಾಡ, ಮನೋಹರ್ ತಹಶೀಲ್ದಾರ್, ರುದ್ರಪ್ಪ ಲಮಾಣಿ, ಶಿವಣ್ಣನವರ್, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ್, ಪ್ರಕಾಶ್ ಗೌಡ ಪಾಟೀಲ್, ಸಂಜೀವ್ ನೀಲಗಿ, ಬ್ಯಾಡಗಿಯ ಪಾಟೀಲ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿ ಯಾರನ್ನು ಕಣಕ್ಕಿಳಿಸಬೇಕು ಎಂಬ ನಿರ್ಧಾರ ಕಾಂಗ್ರೆಸ್‌ನಲ್ಲಿ ಇದುವರೆಗೂ ಆಗಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಉದಾಸಿ ವಿರುದ್ಧ ಸೋಲನುಭವಿಸಿದ್ದ ಶ್ರೀನಿವಾಸ್ ಹಾಗೂ 2013ರಲ್ಲಿ ಸಿಎಂ ಉದಾಸಿ ವಿರುದ್ಧ ಗೆಲುವು ಸಾಧಿಸಿ ಸಚಿವರಾಗಿದ್ದ ಮನೋಹರ್ ತಹಶೀಲ್ದಾರ್ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದೆ.
'ಟಿಕೆಟ್ ಕೊಡದಿದ್ರೆ ಪಕ್ಷದ ಪರ ಕೆಲಸ ಮಾಡಲ್ಲ':
ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಮನೋಹರ್, ತಾವು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ತಮಗೆ ಮನ್ನಣೆ ನೀಡದಿದ್ದರೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ. ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಸಿಂದಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಮನಗೂಳಿ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಶಾಸಕರಾಗಿದ್ದ ಎಂ.ಸಿ ಮನಗೂಳಿ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಈಗ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.