ಬೆಂಗಳೂರು:ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವ ಬಗ್ಗೆ ಆಕ್ಷೆಪಣೆ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಆದೇಶ ನೀಡಿದೆ.
ಕೇಂದ್ರೀಯ ತನಿಖಾ ದಳವು ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಿರುವ ಎಫ್ಐಆರ್ನ್ನು ರದ್ದುಪಡಿಸಬೇಕೆಂದು ಕೋರಿ ಡಿಕೆ ಶಿವಕುಮಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ಏಕ ಸದಸ್ಯ ಪೀಠವು ಪ್ರತಿವಾದಿಗಳಾದ ಸಿಬಿಐಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.
ಸಿಬಿಐ ಪರ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಎರಡು ವಾರ ಕಾಲಾವಕಾಶ ನೀಡುವಂತೆ ಕೋರಿದರು. ಇದಕ್ಕೆ ಶಿವಕುಮಾರ್ ಪರ ಹಿರಿಯ ವಕೀಲ ಸಿ.ಎಚ್ ಜಾಧವ್ ಅವರು ಆಕ್ಷೇಪಣೆಯ ಪ್ರತಿಯನ್ನು ಅರ್ಜಿದಾರರಿಗೆ ಮುಂಚಿತವಾಗಿ ನೀಡಲು ಆದೇಶಿಸಬೇಕೆಂದು ಮನವಿ ಮಾಡಿದರು. ನ್ಯಾಯಾಲಯವು ಒಪ್ಪಿಗೆ ಸೂಚಿಸಿ ಆಕ್ಷೇಪಣೆಯನ್ನು ಮುಂಚಿತವಾಗಿ ಅರ್ಜಿದಾರರ ವಕೀಲರಿಗೆ ನೀಡಲು ಆದೇಶಿಸಿದೆ.
ಡಿಕೆ ಶಿವಕುಮಾರ್ ಅವರು ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅಷ್ಟೇ ಅಲ್ಲ ರಿಯಲ್ ಎಸ್ಟೇಟ್, ಶಿಕ್ಷಣ ಕೇತ್ರ ಸೇರಿದಂತೆ ಇತರ ವ್ಯವಹಾರಗಳ ಮೂಲಕವೂ ಆದಾಯದ ಮೂಲ ಹೊಂದಿದ್ದಾರೆ. ಡಿಕೆಶಿ ಕುಟುಂಬದ ಇತರ ಸದಸ್ಯರ ಆದಾಯವನ್ನೂ ಸಹ ಅವರ ಲೆಕ್ಕಕ್ಕೇ ಸೇರಿಸಲಾಗಿದೆ. ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ವಾದಿಸಲಾಗಿತ್ತು. ಸಿಬಿಐ ದಾಖಲು ಮಾಡಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಕಳೆದ ವಾರ ಹೈಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿತ್ತು.
ಡಿಕೆ ಶಿ ಹೊಂದಿದ್ದಾರೆನ್ನಲಾದ ಅಕ್ರಮ ಆಸ್ತಿ ಗೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆ 2017 ರ ಆಗಸ್ಟ್ 2 ರಂದು ಬೆಂಗಳೂರು ಮತ್ತು ದೆಹಲಿಗಳಲ್ಲಿನ ಆಸ್ತಿ ಪಾಸ್ತಿ ಮೇಲೆ ದಾಳಿ ನಡೆಸಿದ ಪ್ರಕರಣ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. 2018 ರ ಆಗಸ್ಟ್ನಲ್ಲಿ ಜಾರಿ ನಿರ್ದೆಶನಾಲಯವು ಆದಾಯ ತೆರಿಗೆ ಇಲಾಖೆಯ ಮಾಹಿತಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಬಗ್ಗೆ ಡಿಕೆ ಶಿವಕುಮಾರ್ ವಿರುದ್ಧ ಕಾನೂನು ರೀತಿ ಕ್ರಮ ತಗೆದುಕೊಳ್ಳುವಂತೆ ಇಡಿಯು ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಈ ನಡುವೆ ರಾಜ್ಯ ಸರಕಾರವು 2019 ರ ಸೆಪ್ಟೆಂಬರ್ ತಿಂಗಳಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು. ಆ ಪ್ರಕಾರ 2020 ರ ಅಕ್ಟೋಬರ್ 3 ರಂದು ಕೆಂದ್ರೀಯ ತನಿಕಾ ದಳವು ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಿತ್ತು.
ಓದಿ:ಅಕ್ರಮ ಆಸ್ತಿ ಸಂಪಾದನೆ ಪಕ್ರರಣ ರದ್ಧತಿ ಕೋರಿ ಡಿಕೆಶಿ ಹೈಕೋರ್ಟ್ ಮೊರೆ: ಸಿಬಿಐಗೆ ನೋಟಿಸ್