ಬೆಂಗಳೂರು: ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಸ್ಥಳೀಯ ನಾಯಕರ ಜೊತೆ ಡಿ.ಕೆ.ಶಿವಕುಮಾರ್ ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಶಿರಾ ಉಪ ಚುನಾವಣೆ: ಗೆಲ್ಲುವ ತಂತ್ರಗಾರಿಕೆ ರೂಪಿಸಲು ಕೈ ನಾಯಕರ ಸಭೆ ಕರೆದ ಡಿಕೆಶಿ ಕೋವಿಡ್-19ನಿಂದ ಚೇತರಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿರುವ ಡಿಕೆಶಿ ಶಿರಾ ಕ್ಷೇತ್ರದ ಉಪ ಚುನಾವಣೆ ಗೆಲ್ಲುವುದನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಹಿಂದೆ ತಾವು ಕಳೆದುಕೊಂಡಿರುವ ಕ್ಷೇತ್ರವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಆರಂಭಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದಾಗಿದ್ದು, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿ ಗೆಲ್ಲುವ ಮೂಲಕ ಅಧ್ಯಕ್ಷಗಿರಿಯ ಶುಭಾರಂಭ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರ ನಡುವಿನ ಅಸಮಾಧಾನ, ತಾರತಮ್ಯ ಹಾಗೂ ಭೇದ-ಭಾವ ಹೋಗಲಾಡಿಸಿ ಎಲ್ಲಾ ನಾಯಕರು ಒಂದಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಸಂಕಲ್ಪ ತೊಡುವ ಕಾರ್ಯದಲ್ಲಿ ಮನವೊಲಿಸಲು ಈ ಸಭೆ ಕರೆದಿದ್ದಾರೆ.
ಈಗಾಗಲೇ ಪಕ್ಷದ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಕೆ.ಎನ್.ರಾಜಣ್ಣರನ್ನು ನಿವಾಸಕ್ಕೆ ಕರೆಸಿ ಮನವೊಲಿಸಿರುವ ಡಿಕೆಶಿ, ಇದೀಗ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ.
ತುಮಕೂರು ಜಿಲ್ಲೆಯ ಕೈ ಮುಖಂಡರ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಮಾಜಿ ಸಚಿವ ಜಯಚಂದ್ರ, ಮಾಜಿ ಸಂಸದರಾದ ಮುದ್ದಹನುಮೇಗೌಡ, ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಷಡಕ್ಷರಿ ಹಾಗೂ ರಾಜಣ್ಣ ಪುತ್ರ ರಾಜೇಂದ್ರ ಭಾಗಿಯಾಗಿದ್ದಾರೆ.
ಒಗ್ಗಟ್ಟಿನ ಮಂತ್ರ:
ಕೊರೊನಾ ಸೋಂಕಿನಿಂದ ಮುಕ್ತರಾದ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಪ್ರಮುಖ ನಾಯಕರನ್ನು ಕೂಡ ಆಹ್ವಾನಿಸಿ ಮಹತ್ವದ ಸಭೆ ನಡೆಸಿದ್ದಾರೆ. 2018ರ ಚುನಾವಣೆಯಲ್ಲಿ ತಾವು ಕಳೆದುಕೊಂಡ ಶಿರಾ ಕ್ಷೇತ್ರವನ್ನು ಮರಳಿ ಪಡೆಯುವ ಮಹತ್ವದ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯದ ಪ್ರಮುಖ ನಾಯಕರ ಮೂಲಕ ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟು ಮೂಡಿಸುವ ಸಂದೇಶ ಕೂಡ ಇದೇ ಸಂದರ್ಭ ಸಾರುವ ಪ್ರಯತ್ನ ಮಾಡಿದ್ದಾರೆ.