ಬೆಂಗಳೂರು:ಕಾಂಗ್ರೆಸ್ ಪಕ್ಷದ ಜನಧ್ವನಿ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಯಶಸ್ವಿಗೊಳಿಸಿದ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಜನಧ್ವನಿ ಯಶಸ್ವಿಗೊಳಿಸಿದ್ದಕ್ಕೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಎಲ್ಲಾ ಕಾರ್ಯಕರ್ತ ಬಂಧುಗಳೇ, ರಾಜ್ಯದ ಜನರ ನೋವು-ಸಂಕಟಗಳು ಆಗಸ್ಟ್ 20ರಂದು ಜನಧ್ವನಿಯಾಗಿ ರಾಜ್ಯವನ್ನು ತಲುಪಿದ್ದು, ಪ್ರತಿ ಜಿಲ್ಲೆ, ತಾಲೂಕುಗಳಲ್ಲೂ ನಿಮ್ಮ ಹೋರಾಟ ಮನೆಮಾತಾಗಿದೆ. ಜನಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸುವುದು ನಮ್ಮ ಕರ್ತವ್ಯ. ಕಷ್ಟ ಕಾಲದಲ್ಲೂ ಹೋರಾಟ ಯಶಸ್ವಿಗೊಳಿಸಿದ ನಿಮ್ಮೆಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ.
ಪ್ರಕೃತಿ ವಿಕೋಪದಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮಾನವೀಯ ನೆಲೆಯಲ್ಲಿ ನಾವೆಲ್ಲ ಅವರಿಗೆ ನೆರವಾಗಬೇಕು, ಸಹಾಯ ಮಾಡಬೇಕು. ಇದು ನಮ್ಮ ಧರ್ಮ, ಕರ್ತವ್ಯ ಮತ್ತು ಆದ್ಯತೆ. ಈಗಾಗಲೇ ನಾನು ಅನೇಕ ನಾಯಕರಲ್ಲೂ ಮನವಿ ಮಾಡಿಕೊಂಡಿದ್ದೇನೆ. ನಾನೂ ಸಹ ಕೆಲವು ಭಾಗಗಳಿಗೆ ಭೇಟಿ ನೀಡಲಿದ್ದೇನೆ. ಹಾಗಾಗಿ ನೀವು ಸಹ ಸಜ್ಜಾಗಿ ಎಂದು ಕರೆ ನೀಡಿದ್ದಾರೆ.
ಪ್ರಮುಖವಾಗಿ ಅತಿವೃಷ್ಟಿಯಿಂದ ಹಾನಿಗೊಳಗಾದ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ, ಅಲ್ಲಿಯ ಜನರಿಗೆ ಧೈರ್ಯ ತುಂಬಬೇಕಿದೆ. ಜೊತೆಗೆ ವರ್ಷದ ಹಿಂದೆ ಪ್ರವಾಹದಿಂದ ಸಂಭವಿಸಿದ ಹಾನಿಗೆ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಅದನ್ನು ಸರ್ಕಾರಕ್ಕೆ ತಲುಪಿಸಬೇಕಿದೆ. ನಾವು ನೀವೆಲ್ಲಾ ಅವರ ಧ್ವನಿಯಾಗೋಣ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.