ಬೆಂಗಳೂರು: ಕನ್ನಡ ಚಿತ್ರರಂಗದ ದೊಡ್ಮನೆ ದೀಪವಾಗಿದ್ದ, ಪವರ್‌ಸ್ಟಾರ್ ಪುನೀತ್ ರಾಜ್ಕುಮಾರ್ರ ಅಂತ್ಯಕ್ರಿಯೆ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರು ಮಾತ್ರ ಭಾಗವಹಿಸಿದ್ದರು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಸರಳತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನ ಬೇರೆ ಕಲಾವಿದರು ನೋಡಿ ಕಲಿಯಬೇಕು ಅಂತಾ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಜನ ಸಾಗರವನ್ನ ನಾವು ನೋಡಿದ್ದೇವೆ. ಜನ ಉಚಿತ ಮರಣ ಖಚಿತ. ಮನುಷ್ಯನ ಹುಟ್ಟು ಆಕಸ್ಮಿಕ, ಆದರೆ ಸಾವು ಅನಿವಾರ್ಯ ಅಂತಾ ನಾನು ಯಾವಾಗಲೂ ಹೇಳ್ತಾ ಇದ್ದೆ. ಹುಟ್ಟು ಸಾವಿನ ಮಧ್ಯೆ ನಾವು ಏನ್ ಮಾಡಿದ್ದೇವೆ ಅನ್ನೋದು ಮುಖ್ಯ. ಇದರಿಂದಲೇ ಪುನೀತ್ ಅವರು ಪವರ್ ಸ್ಟಾರ್ ಆಗಿದ್ದಾರೆ. ಅವರು ಅಜಾತ ಶತ್ರು ಎಂದು ಕಣ್ಣೀರಿಡುತ್ತಲೇ ಡಿಕೆಶಿ ಮಾತನಾಡಿದರು.
'ಹೃದಯದ ಸ್ಟಾರ್'
ಪುನೀತ್ ಕೇವಲ ಪವರ್ ಸ್ಟಾರ್ ಅಲ್ಲ. ಕರ್ನಾಟಕ ರಾಜ್ಯದ ಜನರ ಹೃದಯವನ್ನ ಗೆದ್ದಿದ್ದಾರೆ. 'ಹೃದಯದ ಸ್ಟಾರ್' ಅಂದ್ರೂ ತಪ್ಪಿಲ್ಲ. ಅನೇಕ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬಂದು, ಅವರನ್ನು ನೋಡಿ ಕಣ್ಣು ತುಂಬಿಕೊಂಡಿದ್ದಾರೆ. ನಾನು ಪುನೀತ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರೊಬ್ಬ ಕಲಾವಿದ ಮಾತ್ರವಲ್ಲ. ಸಮಾಜದ ಸೇವೆಯಲ್ಲಿ ಅವರ ಕೊಡುಗೆ ದೊಡ್ಡದು. ಸರ್ಕಾರ ಯಾವುದೇ ಕೆಲಸಕ್ಕೆ ಕರೆದರೂ ಅವರು ನಿರಾಕರಿಸುತ್ತಿರಲಿಲ್ಲ. ಸರ್ಕಾರದ ಕೆಲಸಕ್ಕೆ ಹಣ ಪಡೆಯುತ್ತಿರಲಿಲ್ಲ. ನಾನು ಲೈಟ್ ಮತ್ತು ಹಾಲಿನ ಜಾಹೀರಾತಿಗಾಗಿ ಅವರನ್ನು ಕರೆದಿದ್ದೆ. ಒಂದು ರೂಪಾಯಿ ಹಣ ಪಡೆಯದೇ ಪುನೀತ್ ಬಂದು ಜಾಹೀರಾತಿನಲ್ಲಿ ನಟಿಸಿದರು. ಬೇರೆಯವರು ಆಗಿದ್ದರೆ ದುಡ್ಡು ಕಾಸು ಅಂತಾ ನೊಡ್ತಾ ಇದ್ದರು ಎಂದರು.