ಬೆಂಗಳೂರು:ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದಾಗಿ ಜಾರಿಗೆ ತರುತ್ತಿರುವ ಜನ ವಿರೋಧಿ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ತಿರಸ್ಕರಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನೂತನ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ವಿಚಾರವಾಗಿ ಸೋಮವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ನಾವು ರಾಜ್ಯಪಾಲರಿಗೆ ಎರಡು ಮನವಿ ಸಲ್ಲಿಸಿದ್ದೇವೆ. ಭೂ ಸುಧಾರಣಾ, ಎಪಿಎಂಸಿ, ಕೈಗಾರಿಕಾ ವಿವಾದ ಕಾಯ್ದೆ ಸಂಬಂಧ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ರಾಜ್ಯಪಾಲರ ಮುಂದೆ ಪ್ರಶ್ನಿಸಲಾಗಿದೆ. ಬಂಡವಾಳಶಾಹಿಗಳಿಗೆ ಸಹಾಯ ಮಾಡಲು ಸರ್ಕಾರ ಈ ಕ್ರಮಗಳನ್ನು ತೆಗೆದುಕೊಂಡಿದೆ. ಇಂತಹ ರೈತ ವಿರೋಧಿ ಕಾಯ್ದೆಗಳಿಲ್ಲದೇ ರಾಜ್ಯವನ್ಮು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲವೇ? ಕೇಂದ್ರ ಸರ್ಕಾರ ನಮ್ಮ ಮೇಲೆ ಒತ್ತಡ ಹೇರಲು ಮೂರು ಕಾನೂನು ತಂದಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಸಿಎಂ ಆಗಿದ್ದಾಗ ಈ ರೀತಿ ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದರು. ಆದ್ರೀಗ ಅವರೇ ತಮ್ಮ ಮಾತು ಮುರಿದು ಈ ರೈತ ವಿರೋಧಿ ಕಾನೂನುಗಳನ್ನ ಜಾರಿ ಮಾಡಲು ಮುಂದಾಗಿದ್ದಾರೆ. ಮೋದಿ ಅವರ ಕುರ್ಚಿ ಬದಲಾದಂತೆ ಅವರ ತೀರ್ಮಾನ ಕೂಡ ಬದಲಾಗಿದೆ. ಕಾಂಗ್ರೆಸ್ ರೈತರ ಪರವಾಗಿ ನಿಂತು ಭೂಸುಧಾರಣೆ, ಎಪಿಎಂಸಿ, ಕೈಗಾರಿಕೆಗಳ ವಿವಾದ, ಕಾರ್ಮಿಕ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಇಳಿದಿದೆ ಎಂದರು.
ಮೊದಲ ಬಾರಿಗೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಂದು ಮಸೂದೆಯನ್ನು ವಿಧಾನ ಪರಿಷತ್ನಲ್ಲಿ ತಿರಸ್ಕರಿಸಲಾಗಿದೆ. ಇವತ್ತು ರೈತ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಬಂದ್ ಮಾಡುತ್ತಿವೆ. ಸರ್ಕಾರ ಬಲವಂತದ ಕಾನೂನು ಕ್ರಮದ ಬೆದರಿಕೆ ಹಾಕುತ್ತಿದೆ. ಹೀಗಾಗಿ ಜನ ವಿರೋಧಿ ಕಾಯ್ದೆಗಳಿಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಮನವಿ ಸಲ್ಲಿಸಿದ್ದೇವೆ. ರಾಷ್ಟ್ರಪತಿಗಳು ಕೂಡ ಇವುಗಳನ್ನು ವಜಾ ಮಾಡಬೇಕು ಎಂದು ರಾಜ್ಯಪಾಲರ ಮೂಲಕ ಕೋರಿದ್ದೇವೆ ಎಂದಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರನ್ನು ಒಳಗೊಂಡ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.