ಬೆಂಗಳೂರು: ನಗರದಲ್ಲಿ ಪಾದಯಾತ್ರೆ ಆರಂಭವಾದ ಎರಡು ದಿನದಲ್ಲಿ ಉಭಯ ನಾಯಕರು ನಡೆದಿದ್ದೇ ಅಪರೂಪ. ನಿನ್ನೆ ಬೆಳಿಗ್ಗೆ ಒಂದಿಷ್ಟು ದೂರ ಒಟ್ಟಾಗಿ ಸಂಚರಿಸಿದ ನಾಯಕರು ನಂತರ ತಮ್ಮ ತಮ್ಮ ಬೆಂಬಲಿಗರ ಜೊತೆ ಪ್ರತ್ಯೇಕವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಊಟಕ್ಕೆಂದು ತಮ್ಮ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಮಧ್ಯಾಹ್ನದ ಪಾದಯಾತ್ರೆಯಲ್ಲಿ ಭಾಗಿಯಾಗಿರಲಿಲ್ಲ.
ಇಂದು ಬೆಳಗ್ಗಿನಿಂದಲೂ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಾಗಿ ನಡೆಯಲಿಲ್ಲ. ಬೆಳಿಗ್ಗೆ ಸಿದ್ದರಾಮಯ್ಯ ಮುಂಚೆ ಪಾದಯಾತ್ರೆ ಆರಂಭಿಸಿದರು. ಇವರು ತೆರಳಿದ ಬಳಿಕ ಡಿ.ಕೆ.ಶಿವಕುಮಾರ್ ಆಗಮಿಸಿದರು. ಎನ್.ಎ.ಹ್ಯಾರಿಸ್ ಪ್ರತಿನಿಧಿಸುವ ಶಾಂತಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬಂದ ಬಳಿಕ ಹರೀಶ್ ಹಾಗೂ ಅವರ ಪುತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಕೇವಲ ಡಿಕೆಶಿ ವೈಭವಕ್ಕೆ ಪಾದಯಾತ್ರೆ ಮಾಡಿದರು.
ಮಧ್ಯಾಹ್ನ ಭೋಜನ ವಿರಾಮದ ಬಳಿಕ ಶಿವಕುಮಾರ್ ಹೊರಡುವುದಕ್ಕೂ 15 ನಿಮಿಷ ಮುನ್ನವೇ ಸಿದ್ದರಾಮಯ್ಯ ಪಾದಯಾತ್ರೆ ಆರಂಭಿಸಿದರು. ಇಬ್ಬರು ನಾಯಕರು ಪ್ರತ್ಯೇಕವಾಗಿಯೇ ಹಲಸೂರು ಸಮೀಪ ಇರುವ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬೆಳಿಗ್ಗೆಯಿಂದ ನಾನೊಂದು ತೀರ ನೀನೊಂದು ತೀರ ಅಂತಿದ್ದ ನಾಯಕರು ಸಂಜೆ ಅರಮನೆ ಮೈದಾನ ತಲುಪುವ ಸಮಯಕ್ಕೆ ಒಟ್ಟಾಗಿ ಹೆಜ್ಜೆ ಹಾಕಿದರು.
ಮೊಳಗಿದ ತಮಿಳು ಹಾಡು:ಮೇಕೆದಾಟು ಪಾದಯಾತ್ರೆಯಲ್ಲಿ ಮೊಳಗಿದ ತಮಿಳು ಗೀತೆ ಎಲ್ಲರ ಹುಬ್ಬೇರುವಂತೆ ಮಾಡಿತು. ತಮಿಳು ಭಾಷಿಗರು ಹೆಚ್ಚಿರುವ ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ ಸಂದರ್ಭ ಅದರಲ್ಲೂ ಟ್ರಿನಿಟಿ ವೃತ್ತ ತಲುಪಿದಾಗ ಆರ್ಕೆಸ್ಟ್ರಾ ಗಾಯಕರು ಹಾಡೊಂದನ್ನು ಹಾಡಿದರು.