ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಠಾಣೆ ಹಾಗೂ ಇನ್ನಿತರೆ ವಾಹನಗಳಿಗೆ ಹಾನಿಯಾಗಿದೆ. ಈ ಘಟನೆ ಬಳಿಕ ಆರ್ಟಿಒ ಅಧಿಕಾರಿಗಳು ವಾಹನಗಳ ಪರಿಶೀಲನೆ ನಡೆಸಿ ಕಚೇರಿಗೆ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ಸದ್ಯ ಅದರ ಅಂದಾಜು ಮೌಲ್ಯದ ಬಗ್ಗೆ ಅಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಡಿಜೆ ಹಳ್ಳಿಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸ್ ಠಾಣೆ, ಶಾಸಕರ ಮನೆ, ಆರೋಪಿ ನವೀನ್ ಮನೆ ಬಳಿ ಸಾಕಷ್ಟು ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದರು. ಇನ್ನು ಇದರಿಂದ ಸಾರ್ವಜನಿಕ ವಾಹನ, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ನಿಖರವಾಗಿ ಮಾಹಿತಿ ಲಭ್ಯವಿರಲಿಲ್ಲ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಹಾನಿಯಾಗಿರುವ ವಾಹನಗಳ ಪರಿಶೀಲನೆಗೆ ಎರಡು ಆರ್ಟಿಒ ಕಚೇರಿಗಳು ವರದಿ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಸ್ತೂರಿನಗರ ಹಾಗೂ ಯಶವಂತಪುರದ ಕಚೇರಿಯಲ್ಲಿ ತಲಾ 33 ವಾಹನಗಳನ್ನು ನೀಡಲಾಗಿದ್ದು, ಹಾನಿಯಾಗಿರುವ ವಾಹನಗಳ ಈಗಿನ ಬೆಲೆ ಒಟ್ಟು 46 ಲಕ್ಷ ಎನ್ನಲಾಗಿದೆ.
ಹಾನಿಗೀಡಾದ ವಾಹನಗಳ ವರದಿ ಸಿದ್ಧಪಡಿಸಿದ ಆರ್ಟಿಒ ಗಲಭೆ ನಡೆಯುವಾಗಿ ಕಿಡಿಗೇಡಿಗಳು ಕಲ್ಲಿನಿಂದ ಜಜ್ಜಿಯೂ ಕೆಲ ವಾಹನಗಳನ್ನು ಹಾನಿ ಮಾಡಿದ್ದಾರೆ. ಕೆಎ 04 JY 9343, ಕೆಎ 04 JC 8523, ಕೆಎ 04 JD 2055 ಸೇರಿ ಒಟ್ಟು 33 ವಾಹನಗಳನ್ನು ಯಶವಂತಪುರ ಠಾಣೆಗೆ ಕೊಟ್ಟಿದ್ದರು. ಈ ಪೈಕಿ ಪೊಲೀಸರ ಒಂದು ವಾಹನವನ್ನೂ ಆರ್ಟಿಒ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇದುವರೆಗೂ ಕೆಲ ವಾಹನಗಳಿಗೆ ದಾಖಲೆ ಇಲ್ಲ. ಇನ್ನೂ, ಕೆಲ ವಾಹನಗಳ ದಾಖಲೆ ಇಲ್ಲದ ಕಾರಣ ಅದರ ಅಂದಾಜು ಮೌಲ್ಯವನ್ನು ಈಗಿನ ಬೆಲೆಯಲ್ಲಿ ಕಡಿಮೆ ಮಾಡಿ ಹಾಕಲಾಗಿದೆ ಎಂದು ಇನ್ಸಪೆಕ್ಟರ್ ಮಾಹಿತಿ ನೀಡಿದ್ದಾರೆ.
ಸದ್ಯ ಇದರ ಜೊತೆಗೆ ಹೈಫೈ ಬೈಕ್ಗಳಿಗೂ ಹಾನಿ ಮಾಡಲಾಗಿದೆ. 1 ಲಕ್ಷ 50 ಸಾವಿರ ರೂ. ಮೌಲ್ಯದ ಎರಡು ಬೈಕ್ಗಳು ಜಖಂಗೊಂಡಿವೆ.ಸದ್ಯ ಇದೆಲ್ಲದರ ಬಗ್ಗೆ ವರದಿ ರೆಡಿ ಮಾಡಿರುವ ಆರ್ಟಿಒ ಅಧಿಕಾರಿಗಳು ತನಿಖಾಧಿಕಾರಿಗಳಿಗೆ ನೀಡಲು ನಿರ್ಧರಿಸಿದ್ದಾರೆ.