ಬೆಂಗಳೂರು:ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ಬಿರುಸಿನಿಂದ ಸಾಗಿದ್ದು, ಹಲವಾರು ಮಾಹಿತಿಗಳನ್ನ ಪೊಲೀಸರು ಕಲೆಹಾಕ್ತಿದ್ದಾರೆ. ಮತ್ತೊಂದೆಡೆ ಪ್ರಕರಣದ ಪ್ರಮುಖ ರೂವಾರಿಗಳನ್ನು ಮಟ್ಟ ಹಾಕಲು ಪಕ್ಕಾ ಸಾಕ್ಷಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದರ ನಡುವೆ ಕೆಲ ಆರೋಪಿಗಳ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿ ವಿನಾ ಕಾರಣ ನಮ್ಮ ಮಕ್ಕಳನ್ನ ಅರೆಸ್ಟ್ ಮಾಡಿದ್ದಾರೆ. ನಮ್ಮ ಗಂಡ ಅಮಾಯಕ ಹೀಗೆ ಕೆಲವೊಂದು ಕಾರಣ ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಯಾಲಯ ಕೂಡ ಪೊಲೀಸರ ತನಿಖೆ ಮೇಲೆ ನಂಬಿಕೆ ಇಟ್ಟು ಕೆಲ ಅರ್ಜಿಗಳನ್ನ ವಜಾ ಮಾಡಿದೆ. ಇನ್ನು ತನಿಖಾಧಿಕಾರಿಗಳ ಬಳಿಯಿಂದ ತನಿಖಾ ಪಾಲನಾ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಇಲ್ಲಿಯವರೆಗೆ ನಡೆದ ತನಿಖೆಯ ವರದಿ, ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿ, ಹಾಗೆಯೇ ಘಟನೆಯ ಕಾರಣ ಪ್ರತಿಯೊಂದನ್ನೂ ಉಲ್ಲೇಖ ಮಾಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.
ಮತ್ತೊಂದೆಡೆ ಡಿ.ಜೆ.ಹಳ್ಳಿ ಠಾಣೆಯಲ್ಲಿ ಇಂದು ಕೂಡ ತನಿಖೆ ಮುಂದುವರೆದಿದೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಆರೋಪಿಗಳನ್ನ ಬಲೆಗೆ ಬೀಳಿಸಲು ಡಿ.ಜೆ.ಹಳ್ಳಿ ಪೊಲೀಸರು ತಂಡ ರೆಡಿ ಮಾಡಿದ್ದಾರೆ. ಈಗಾಗಲೇ ಪ್ರಕರಣ ತನಿಖೆ ಸಿಸಿಬಿ ಹಾಗೂ ಡಿ.ಜೆ.ಹಳ್ಳಿ ಠಾಣೆಗೆ ಡಿವೈಡ್ ಆದ ಕಾರಣ ಡಿ.ಜೆ.ಹಳ್ಳಿ ಪೊಲೀಸರು ಎಫ್ಐಆರ್ ಸಂಖ್ಯೆಗಳ ಆಧಾರದ ಮೇರೆಗೆ ತನಿಖೆ ನಡೆಸುತ್ತಿದ್ದಾರೆ.