ಬೆಂಗಳೂರು:ಜಿಲ್ಲೆಗಳ ಕೋವಿಡ್ ಪರಿಸ್ಥಿತಿ ನಿಯಂತ್ರಣ ಹಾಗೂ ವ್ಯವಸ್ಥೆ ನಿರ್ವಹಣೆ ಸಂಪೂರ್ಣ, ನೇರ ಹೊಣೆಗಾರಿಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳದ್ದೇ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ವರ್ಚುಯಲ್ ವೇದಿಕೆಯ ಮೂಲಕ ಬುಧವಾರ ಬೆಂಗಳೂರಿನಿಂದಲೇ ಬಳ್ಳಾರಿ ಜಿಲ್ಲೆಯ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ಮಾಡಿದ ವೇಳೆ ಮಾತನಾಡಿದ ಡಿಸಿಎಂ, ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಕಂಡು ಬಂದಿರುವ ಲೋಪದೋಷಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲಾ ಕೇಂದ್ರದಿಂದಲೇ ವರ್ಚುಯಲ್ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಲ್ಲಾ ತಾಲೂಕುಗಳ ತಹಸೀಲ್ದಾರ್‌ಗಳೊಂದಿಗೆ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಜತೆ ಮಾತನಾಡಿದ ಡಿಸಿಎಂ, ಕೋವಿಡ್ ನಿರ್ವಹಣೆಯಲ್ಲಿ ಏನೇ ಲೋಪವಾದರೂ ಜಿಲ್ಲಾಧಿಕಾರಿಯೇ ಹೊಣೆ ಎಂದರು.
ಪರೀಕ್ಷೆ-ಫಲಿತಾಂಶದ ಬಗ್ಗೆಯೂ ಅತೃಪ್ತಿ:
ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆ ನಡೆಯುತ್ತಿಲ್ಲ. ಇದರಲ್ಲಿ ಬಹಳ ಲೋಪ ಕಂಡುಬರುತ್ತಿದೆ. ರಿಸಲ್ಟ್ ಕೂಡ ತುಂಬಾ ತಡವಾಗಿ ನೀಡಲಾಗುತ್ತಿದೆ. ರಿಸಲ್ಟ್ ಎಷ್ಟು ತಡವಾಗುತ್ತೋ ರೋಗವು ಅಷ್ಟು ಉಲ್ಬಣವಾಗುತ್ತದೆ. ಹೀಗಾಗಿ ಸಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ ಎಂದು ಡಿಸಿಎಂ ಹೇಳಿದರು. ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿ ತಮ್ಮ ಕೈಯ್ಯಲ್ಲಿದ್ದ ಮಾಹಿತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಈ ಬಗ್ಗೆ ಕೂಡಲೇ ಎಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಆನಂದ್ ಸಿಂಗ್ ಅವರಿಗೆ ವಿವರಿಸಿದರು.
ಯಾವ ಕಾರಣಕ್ಕೂ ರೋಗ ಉಲ್ಬಣವಾಗುವ ಹಂತಕ್ಕೆ ಬಿಡಲೇಬಾರದು. ವ್ಯಕ್ತಿಯಿಂದ ಸ್ಯಾಂಪಲ್ ಸ್ವೀಕರಿಸಿದ 24 ಗಂಟೆಯೊಳಗೆ ಫಲಿತಾಂಶ ಕೊಡಬೇಕು. ಒಂದು ಫಲಿತಾಂಶ ಪಾಸಿಟಿವ್ ಬಂದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡುವುದೋ ಅಥವಾ ಅವರವ ಮನೆಯಲ್ಲೇ ಐಸೋಲೇಷನ್ ಮಾಡಿ ಸೂಕ್ತ ಔಷಧಗಳನ್ನು ಫೂರೈಕೆ ಮಾಡಬೇಕು. ಈ ಪ್ರಕ್ರಿಯೆ ಅತ್ಯಂತ ತ್ವರಿತವಾಗಿ ಆಗಬೇಕು ಹಾಗೂ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು. ರೋಗ ನಿರೋಧಕ ಚಿಕಿತ್ಸೆ ತ್ವರಿತವಾಗಿ ಆರಂಭಿಸದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಡಿಸಿಎಂ ಅವರು ಸಚಿವ ಆನಂದ ಸಿಂಗ್ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಟ್ಟಿ ಅವರಿಗೆ ತಿಳಿಸಿದರು.