ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಕಳೆದ ಎರಡು ದಿನಗಳಲ್ಲಿ ಸುಮಾರು 80,100 ಕುಟುಂಬಗಳಿಗೆ ಎರಡು ತಿಂಗಳ ಉಚಿತ ಮುಂಗಡ ಪಡಿತರವನ್ನು ವಿತರಿಸಲಾಗಿದೆ.
80,100 ಕುಟುಂಬಗಳಿಗೆ ಎರಡು ತಿಂಗಳ ಮುಂಗಡ ಪಡಿತರ ವಿತರಣೆ - ಕೊರೊನಾ ಎಫೆಕ್ಟ್
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಕಳೆದ ಎರಡು ದಿನಗಳಲ್ಲಿ ಸುಮಾರು 80,100 ಕುಟುಂಬಗಳಿಗೆ ಎರಡು ತಿಂಗಳ ಉಚಿತ ಮುಂಗಡ ಪಡಿತರವನ್ನು ವಿತರಿಸಲಾಗಿದೆ.
ಕೊರೊನಾ ಹಿನ್ನೆಲೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಏ. 1ರಿಂದ ಎರಡು ತಿಂಗಳ ಮುಂಗಡ ಪಡಿತರ ವಿತರಣೆ ಕಾರ್ಯವನ್ನು ಪ್ರಾರಂಭಿಸಿತ್ತು. ಕಳೆದ ಎರಡು ದಿನಗಳಲ್ಲಿ ಆಹಾರ ಇಲಾಖೆ ಪಡಿತರ ಅಂಗಡಿ ಮೂಲಕ ಸುಮಾರು 39,639 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಗಿದೆ. ಇನ್ನು 2,778 ಕ್ವಿಂಟಾಲ್ ಗೋಧಿಯನ್ನು ಈವರೆಗೆ ವಿತರಿಸಲಾಗಿದೆ. ಏ. 10ರೊಳಗೆ ಎರಡು ತಿಂಗಳ ಮುಂಗಡ ಪಡಿತರ ವಿತರಿಸಲು ಇಲಾಖೆ ಯೋಜಿಸಿದೆ. ಆ ಮೂಲಕ 10,93,751 ಅಂತ್ಯೋದಯ ಪಡಿತರ ಚೀಟಿದಾರರಿಗೆ ಎರಡು ತಿಂಗಳ ಮುಂಗಡವಾದ 70 ಕೆಜಿ ಅಕ್ಕಿ ಮತ್ತು ಬಿಪಿಎಲ್ನ 3,83,64,923 ಸದಸ್ಯರಿಗೆ ಎರಡು ತಿಂಗಳ ಮುಂಗಡವಾದ 10 ಕೆಜಿ ಅಕ್ಕಿ ಹಾಗೂ 4 ಕೆಜಿ ಗೋಧಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಒಟ್ಟು 4,59,476 ಮೆಟ್ರಿಕ್ ಟನ್ ಅಕ್ಕಿ ಹಾಗೂ 46,433 ಮೆಟ್ರಿಕ್ ಟನ್ ಗೋಧಿಯನ್ನು ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ನೀಡಲು ಯೋಜಿಸಲಾಗಿದೆ. ಇನ್ನು ಎಪಿಎಲ್ ಕಾರ್ಡ್ ಹೊಂದಿದವರಿಗೆ 10 ಕೆಜಿ ಅಕ್ಕಿ, ಒಬ್ಬ ಸದಸ್ಯರ ಪಡಿತರ ಚೀಟಿಗೆ ಹಾಗೂ 20 ಕೆಜಿ ಅಕ್ಕಿಯನ್ನು ಒಬ್ಬರಿಗಿಂತ ಹೆಚ್ಚು ಸದಸ್ಯರ ಪಡಿತರ ಚೀಟಿಗೆ ಪ್ರತಿ ಕೆಜಿಗೆ 15 ರೂ.ನಂತೆ ವಿತರಿಸಲಾಗುತ್ತದೆ. ಒಟ್ಟು 10,086 ಮೆಟ್ರಿಕ್ ಟನ್ ಅಕ್ಕಿ ವಿತರಿಸಲು ಯೋಜಿಸಲಾಗಿದೆ.