ಕರ್ನಾಟಕ

karnataka

ETV Bharat / city

ಕೈ ಪಕ್ಷದಲ್ಲಿ ವೈಯಕ್ತಿಕ ವರ್ಚಸ್ಸಿನ ಮೇಲಾಟ! 'ಗುರು ಶಿಷ್ಯ'ರ ಪಟ್ಟಿಗೆ ಅಡ್ಡಗಾಲು ಹಾಕಿದ್ರಾ ಪರಂ? - ಮಾಜಿ ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಡಿ ಬರುವ ಎಲ್ಲ ಸಮಿತಿಗಳನ್ನು ವಿಸರ್ಜಿಸಿ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಆದೇಶ ಹೊರಡಿಸಿತ್ತು. ಇದಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ಧಪಡಿಸಿದ್ದ ಪಟ್ಟಿಗೆ ಮಾಜಿ ಡಿಸಿಎಂ ಪರಮೇಶ್ವರ್ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ತಂದು ತಡೆ ಹಿಡಿಯುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯ ಕಾಂಗ್ರೆಸ್ ಪಕ್ಷ

By

Published : Sep 29, 2019, 1:54 PM IST

ಬೆಂಗಳೂರು:ನಿರಂತರ ಸೋಲಿನಿಂದ ದುರ್ಬಲಗೊಂಡಿರುವ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಈಗ ಸಿದ್ದರಾಮಯ್ಯ ಹಾಗೂ ಪರಮೇಶ್ವರ್​ ನಡುವಿನ ತಿಕ್ಕಾಟ ಇನ್ನಷ್ಟು ಆತಂಕಕ್ಕೆ ದೂಡಿದೆ. ಪಕ್ಷ ಬಲವರ್ಧನೆಗೆ ಪರಿಶ್ರಮ ಹಾಕುವ ಬದಲು ಇಬ್ಬರು ನಾಯಕರು ವೈಯಕ್ತಿಕ ವರ್ಚಸ್ಸಿಗಾಗಿ ಮೇಲಾಟ ನಡೆಸಿದ್ದು, ಇದು ಪಕ್ಷಕ್ಕೆ ಇನ್ನಷ್ಟು ಆಘಾತ ತಂದಿಡುವ ಪರಿಸ್ಥಿತಿ ನಿರ್ಮಿಸುತ್ತಿದೆ.

ಕಾಂಗ್ರೆಸ್ ಪಕ್ಷದ ಗುರು-ಶಿಷ್ಯರು ಎಂದೇ ಗುರುತಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಡೆಸುತ್ತಿರುವ ಪ್ರಯತ್ನಕ್ಕೆ ಈಗ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಅಡ್ಡಗಾಲು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಕೆಪಿಸಿಸಿ ಸಮಿತಿ ರಚನೆ ಅಪೂರ್ಣ:

ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಅಡಿ ಬರುವ ಎಲ್ಲ ಸಮಿತಿಗಳನ್ನು ವಿಸರ್ಜಿಸಿ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಆದೇಶ ಹೊರಡಿಸಿತ್ತು. ಹೊಸ ಸಮಿತಿ ರಚನೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಅವರ ಸ್ಥಾನವನ್ನು ಹಾಗೆಯೇ ಉಳಿಸಿತ್ತು. ಒಂದಿಷ್ಟು ಹಿರಿಯರ ಸಹಕಾರದೊಂದಿಗೆ ಹೊಸ ಸಮಿತಿ ರಚಿಸಿ ಇನ್ನೇನು ಪ್ರಕಟಿಸಬೇಕು ಎನ್ನುವ ಸಂದರ್ಭದಲ್ಲಿ ಪಟ್ಟಿಗೆ ಕಲ್ಲು ಬಿದ್ದಿದೆ. ಹೊಸ ಪಟ್ಟಿ ಪ್ರಕಟಣೆಗೆ ಮಾಜಿ ಡಿಸಿಎಂ ಪರಮೇಶ್ವರ್ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ತಂದು ತಡೆಹಿಡಿಯುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಸಿದ್ಧಪಡಿಸಿದ ಪಟ್ಟಿಗೆ ಪರಮೇಶ್ವರ್ ತಕರಾರು?

ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಆಪ್ತರನ್ನು ಒಳಗೊಂಡ ಸುಮಾರು 50 ಸದಸ್ಯರನ್ನು ವಿವಿಧ ಸಮಿತಿಗಳಿಗೆ ಸೇರಿಸಿ ಪಟ್ಟಿ ಸಿದ್ಧಪಡಿಸಿದ್ದರು. ಇದು ಒಪ್ಪಿಗೆಗಾಗಿ ಹೈಕಮಾಂಡ್ ಮುಂದೆ ಇರಿಸಲಾಗಿತ್ತು. ಇನ್ನೇನು ಪಟ್ಟಿಗೆ ಸಹಿ ಬೀಳಲಿದೆ ಎನ್ನುವ ಸಂದರ್ಭದಲ್ಲಿ ಪರಮೇಶ್ವರ್ ಮಧ್ಯಪ್ರವೇಶಿಸಿ ತಕರಾರು ತೆಗೆದಿದ್ದಾರೆ. ಈ ಪಟ್ಟಿ ಸಿದ್ಧಪಡಿಸುವ ಹಿಂದೆ ಸಿದ್ದರಾಮಯ್ಯ ಅವರ ಏಕಪಕ್ಷೀಯ ನಿರ್ಧಾರ ಇದೆ. ತಮಗೆ ಬೇಕಾದವರನ್ನು ಪಟ್ಟಿಗೆ ಸೇರಿಸಿ ದಿನೇಶ್ ಗುಂಡೂರಾವ್ ಮೂಲಕ ಪ್ರಕಟಿಸಲು ಮುಂದಾಗಿದ್ದಾರೆ. ಈ ಪಟ್ಟಿಯಲ್ಲಿರುವ ಸಮಿತಿ ರಚನೆಯಾದರೆ ಅದರಿಂದ ಸಿದ್ದರಾಮಯ್ಯರ ಪ್ರಗತಿ ಆಗುತ್ತದೆಯೇ ಹೊರತು ಪಕ್ಷದ ಪ್ರಗತಿ ಆಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದೂ, ಹೀಗಾಗಿ ಪಟ್ಟಿಗೆ ಹೈಕಮಾಂಡ್ ತಡೆ ನೀಡಿದೆ ಎಂದೂ ಹೇಳಲಾಗಿದೆ.

ಸಿದ್ದು ವಿರುದ್ಧ ದನಿ ಎತ್ತುತ್ತಿರುವ ಕೈ ನಾಯಕರು:

ರಾಜ್ಯದಲ್ಲಿ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ತಿಕ್ಕಾಟ ಹೆಚ್ಚಾಗಿದ್ದು, ಈಗಾಗಲೇ ಸಿದ್ದರಾಮಯ್ಯರ ವಿರುದ್ಧ ಹಲವು ನಾಯಕರು ದನಿ ಎತ್ತುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಮುಂದುವರಿಸಲು ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನಕ್ಕೂ ತಮ್ಮವರನ್ನೇ ತಂದು ಕೂರಿಸಲು ಶತ ಪ್ರಯತ್ನ ನಡೆಸಿದ್ದಾರೆ. ಆದರೆ ಇವರ ಈ ಪ್ರಯತ್ನಕ್ಕೆ ಮೂಲ ಕಾಂಗ್ರೆಸ್ಸಿಗರು ಆದ ಡಾ. ಜಿ ಪರಮೇಶ್ವರ್, ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮತ್ತಿತರ ನಾಯಕರು ತಡೆಯಾಗಿದ್ದಾರೆ. ಸಿದ್ದರಾಮಯ್ಯ ಆಪ್ತ ಶಾಸಕರೇ ಕೈಕೊಟ್ಟಿರುವ ಹಿನ್ನೆಲೆ ಮೈತ್ರಿ ಸರ್ಕಾರ ಪತನವಾಗಿದೆ. ಸುಗಮವಾಗಿ ಸಾಗಿದ್ದ ಸರ್ಕಾರ ಬೀಳಲು ಪರೋಕ್ಷವಾಗಿ ಸಿದ್ದರಾಮಯ್ಯರ ಕಾರಣ ಎಂಬ ಮಾತಿದೆ. ಇದರಿಂದ ಪಕ್ಷ ಸಂಘಟನೆ ದೃಷ್ಟಿಯಿಂದ ಇವರನ್ನು ಗಂಭೀರವಾಗಿ ಪರಿಗಣಿಸುವುದು ಒಳಿತಲ್ಲ ಎಂಬ ಮಾಹಿತಿಯನ್ನ ಪರಮೇಶ್ವರ್​ ಹೈಕಮಾಂಡ್​ಗೆ ರವಾನಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪಕ್ಷದ ವಿವಿಧ ಚಟುವಟಿಕೆಗಳು ಸಭೆ-ಸಮಾರಂಭಗಳಲ್ಲಿ ಪರಮೇಶ್ವರ್ ಅನುಪಸ್ಥಿತಿ ಎದ್ದು ಕಾಣುತ್ತಿದ್ದು, ರಾಜ್ಯ ನಾಯಕರ ವಿರುದ್ಧ ಇವರು ಮುನಿಸಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.

ABOUT THE AUTHOR

...view details