ಕರ್ನಾಟಕ

karnataka

ETV Bharat / city

ಪರಿಷತ್ ಚುನಾವಣೆ​​: ಪಟ್ಟಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಭುಗಿಲೆದ್ದ ಅಸಮಾಧಾನ

ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂಬ ಸಿದ್ಧಾಂತಕ್ಕೆ ಬದ್ಧವಾಗಿ ಕಾಂಗ್ರೆಸ್ ಹೈಕಮಾಂಡ್ ಇಬ್ಬರಿಗೆ ಟಿಕೆಟ್ ನೀಡಿದೆ. ಆದರೆ ಅವಕಾಶ ವಂಚಿತ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು ಅಂಥವರಿಗೆ ಅವಕಾಶ ನೀಡಬಹುದಿತ್ತು. ಆದರೆ ಅಂತಹ ಕಾರ್ಯ ಆಗಿಲ್ಲ ಎಂದು ಸಾಕಷ್ಟು ಕಾಂಗ್ರೆಸ್ಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

congress announces candidates for Karnataka legislative council
ವಿಧಾನ ಪರಿಷತ್ ಚುನಾವಣೆ​​ ಕಾಂಗ್ರೆಸ್​​ನಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ

By

Published : May 24, 2022, 10:25 AM IST

Updated : May 24, 2022, 11:57 AM IST

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ನಂತರ ಅಸಮಾಧಾನ ಭುಗಿಲೆದ್ದಿದೆ. ಹೈಕಮಾಂಡ್ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರು ಅಭ್ಯರ್ಥಿಯನ್ನು ಆಯ್ಕೆ ಮಾಡಿಸಿ ಪಟ್ಟಿ ಪ್ರಕಟಿಸಿದ್ದು, ನಾಗರಾಜ್ ಯಾದವ್ ಹಾಗೂ ಅಬ್ದುಲ್ ಜಬ್ಬಾರ್ ಅಭ್ಯರ್ಥಿಗಳಾಗಿ ಘೋಷಿತರಾಗಿದ್ದಾರೆ. ಸಾಕಷ್ಟು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದರು. ಮಾಜಿ ಸಚಿವರು ಹಿರಿಯ ಕಾಂಗ್ರೆಸ್ ನಾಯಕರು ಮೇಲ್ಮನೆಯ ಪ್ರವೇಶಕ್ಕೆ ತಮ್ಮದೇ ಆದ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ನಿನ್ನೆ ಪ್ರಕಟಿಸಿದ ಪಟ್ಟಿ ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗುವಂತೆ ಮಾಡಿದೆ.

ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್

ವರ್ಷದ ಹಿಂದೆ ಮೂವರು ಮಹಿಳಾ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಇದೀಗ ಒಬ್ಬರನ್ನು ಸಹ ಹೊಂದಿಲ್ಲ. ಪರಿಷತ್ ಸ್ಥಾನದಿಂದ ನಿರ್ಗಮಿಸುತ್ತಿರುವ ಮೂವರಲ್ಲಿ ಒಬ್ಬ ಮಹಿಳಾ ಸದಸ್ಯೆ ಇದ್ದು, ಕನಿಷ್ಠ ಅವರನ್ನಾದರೂ ಮರು ಆಯ್ಕೆ ಮಾಡಬಹುದು ಇಲ್ಲವೇ, ಬೇರೊಬ್ಬ ಮಹಿಳಾ ಪ್ರತಿನಿಧಿಗೆ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಮತ್ತೊಮ್ಮೆ ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ಸದಸ್ಯರೊಬ್ಬರಿಗೆ ಮಣೆ ಹಾಕಿರುವುದು ಹಾಗೂ ಈಗಾಗಲೇ ಅಧಿಕಾರವನ್ನು ಅನುಭವಿಸಿದವರಿಗೆ ಮತ್ತೊಮ್ಮೆ ಅವಕಾಶ ನೀಡಿರುವುದು ಹಲವರ ಕೆಂಗಣ್ಣಿಗೆ ಕಾರಣವಾಗಿದೆ.

ವಿಧಾನ ಪರಿಷತ್ ಚುನಾವಣೆ​​ ಕಾಂಗ್ರೆಸ್​​ನಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಮಹಿಳೆಯರು ಎರಡನೇ ದರ್ಜೆ ಪ್ರಜೆಗಳೇ?: ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದು, ಮಹಿಳೆಯರು ಎರಡನೇ ದರ್ಜೆ ಪ್ರಜೆಗಳೇ?, ಕಾಂಗ್ರೆಸ್ ಪಕ್ಷ ಈಸಾರಿ ವಿಧಾನಪರಿಷತ್ ಇಲ್ಲವೇ ರಾಜ್ಯಸಭೆಗೆ ಮಹಿಳೆಯರನ್ನು ಆಯ್ಕೆ ಮಾಡುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಮೂರನೇ ಬಾರಿಯೂ ಸಹ ಕಾಂಗ್ರೆಸ್ ಪಕ್ಷದಿಂದ ಯಾವುದೇ ಮಹಿಳೆಯ ಹೆಸರು ಆಯ್ಕೆಗೆ ಪ್ರಸ್ತಾಪವಾಗಿಲ್ಲ.

ನಾನು ಸೇರಿದಂತೆ ಬಹಳ ಮಂದಿ ಮಹಿಳೆಯರು ಆಯ್ಕೆಯ ನಿರೀಕ್ಷೆಯಲ್ಲಿದ್ದೆವು. ಆದರೆ ನಿರಾಸೆ ಉಂಟಾಗಿದೆ. ಪ್ರತಿಸಾರಿ ನಾವು ಟಿಕೆಟ್ ಕೇಳಿದಾಗಲೂ ಪಕ್ಷದಿಂದ ಒಂದು ನೆಪ ಇರುತ್ತದೆ. ವಿಧಾನಸಭೆ ವಿಧಾನ ಪರಿಷತ್ ಸೇರಿದಂತೆ ಬಹುತೇಕ ಚುನಾವಣೆಗಳಲ್ಲಿ ಮಹಿಳೆಯರಿಗೆ ಅವಕಾಶ ಸಿಗುತ್ತಿಲ್ಲ. ಜಾತಿವಾರು ಟಿಕೆಟ್ ಹಂಚಿಕೆ ಮಾಡಬೇಕು ಎಂಬ ಮಾತನ್ನು ನಾಯಕರು ಹೇಳುತ್ತಾರೆ. ವೈಯಕ್ತಿಕ ಸಾಮರ್ಥ್ಯದಿಂದ ಬೆಳೆದು ಬಂದ ಮಹಿಳೆಯರಿಗೆ ಕಾಂಗ್ರೆಸ್​​​ನಲ್ಲಿ ಅವಕಾಶ ಸಿಗುತ್ತಿಲ್ಲ. ಪಕ್ಷದ ಹಿರಿಯ ರಾಜಕಾರಣಿಗಳ ಪತ್ನಿ, ಪುತ್ರಿ ಹಾಗೂ ಮಗಳು, ರಾಜಕಾರಣಿ ಪತಿಯನ್ನು ಕಳೆದುಕೊಂಡ ವಿಧವೆ ಇಲ್ಲವೇ ಸಂಬಂಧಿಕರು ಇಂದು ಟಿಕೆಟ್ ಪಡೆಯುತ್ತಿದ್ದಾರೆ ಹೊರತು ಬೇರೆಯವರಿಗೆ ಅವಕಾಶ ಸಿಗುತ್ತಿಲ್ಲ.

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ

ಈ ರೀತಿ ಆಯ್ಕೆಯಾಗಿ ಬರುವವರು ಮಹಿಳೆಯರ ಪರವಾಗಿ ಮಾತನಾಡಲು ಸಹ ಸಾಧ್ಯವಿಲ್ಲ. ಮಹಿಳೆಯರ ಬಗ್ಗೆ ಕಾಂಗ್ರೆಸ್ ಪಕ್ಷ ತಾಳಿರುವ ನಿಲುವು ನನಗೆ ಸರಿ ಕಾಣುತ್ತಿಲ್ಲ. ಸ್ವತಂತ್ರವಾಗಿ ರಾಜಕೀಯದಲ್ಲಿ ಬೆಳೆದು ಬಂದ ಮಹಿಳೆಗೆ ಅವಕಾಶ ಸಿಗುತ್ತಿಲ್ಲ. ಕಾಂಗ್ರೆಸ್​​ನಲ್ಲಿ ಬಹಳಷ್ಟು ಮಹಿಳೆಯರಿಗೆ ಪಕ್ಷದ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಹೊರತು ಅಧಿಕಾರ ಅನುಭವಿಸುವ ಅವಕಾಶ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಯ್ಕೆಯಾದವರ ಹಿನ್ನೆಲೆ:ಕಾಂಗ್ರೆಸ್​​ನ ಮೂವರು ಸದಸ್ಯರ ಅವಧಿ ಪೂರ್ಣಗೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿದೆ. ಇಂದು ನಾಮಪತ್ರಸಲ್ಲಿಕೆಗೆ ಕಡೆಯ ದಿನವಾಗಿದ್ದು ನಿನ್ನೆ ಪಕ್ಷದ ಹೈಕಮಾಂಡ್​​ನಿಂದ ಪಟ್ಟಿ ಪ್ರಕಟಗೊಂಡಿದೆ.

ನಾಗರಾಜ್ ಯಾದವ್ ಹಾಗೂ ಅಬ್ದುಲ್ ಜಬ್ಬಾರ್ ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಈ ಸದಸ್ಯರ ಹಿನ್ನೆಲೆಯಲ್ಲಿ ಗಮನಿಸಿದಾಗ, ಅಬ್ದುಲ್ ಜಬ್ಬಾರ್ ಪ್ರಸ್ತುತ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾವಣಗೆರೆ ಜಿಲ್ಲಾಧ್ಯಕ್ಷರಾಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಎಂಎಲ್​​ಸಿ ಆಗಿದ್ದರು. ಅಲ್ಪಸಂಖ್ಯಾತ ಜನಪ್ರತಿನಿಧಿಗಳೆಲ್ಲರ ಒಕ್ಕೊರಲ ಶಿಫಾರಸು ಇವರಿಗೆ ಲಭಿಸಿದೆ. ಹಿರಿಯ ಕಾಂಗ್ರೆಸ್ ನಾಯಕರು ಸಹ ಆಗಿದ್ದಾರೆ. ನಾಗರಾಜ್ ಯಾದವ್ ಗೊಲ್ಲ ಸಮುದಾಯದವರು. ಬಿಎಂಟಿಸಿ ಮಾಜಿ ಅಧ್ಯಕ್ಷರು, ಒಬಿಸಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹೆಸರು ಶಿಫಾರಸ್ಸಾಗಿತ್ತು.‌ ಪಕ್ಷದ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ.

ಕಾರ್ಯಕರ್ತರ ಅಸಮಾಧಾನ: ಅಬ್ದುಲ್ ಜಬ್ಬಾರ್​​ಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೆ ಕೊಟ್ಟವರಿಗೆ ಮತ್ತೆ ಟಿಕೆಟ್ ನೀಡಿದ್ದಾರೆ. ನಿಜವಾದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ತಳಮಟ್ಟದ ಕಾರ್ಯಕರ್ತರಿಗೆ ಪಕ್ಷದಲ್ಲಿ‌ ಬೆಲೆಯೇ ಇಲ್ಲ. ಇದು ಮತ್ತೊಮ್ಮೆ ಸಾಬೀತಾಗಿದೆ. ಸಲೀಂ ಅಹ್ಮದ್, ನಜೀರ್ ಅಹ್ಮದ್, ನಾಸೀರ್ ಹುಸೇನ್ ಇವರೆಲ್ಲರೂ ಮುಸ್ಲಿಂ ನಾಯಕರೇ ಅಲ್ವೇ?, ಮತ್ತೆ ಅವರಿಗೇ ಟಿಕೆಟ್ ನೀಡುವುದು ಯಾವ ನ್ಯಾಯ? ಎಂದು ಸಾಮಾಜಿಕ ಜಾಲತಾಣದ ಮೂಲಕ ಕೆಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವೀಟ್​​ನಲ್ಲಿ ಕಾರ್ಯಕರ್ತರ ಅಸಮಾಧಾನ

ಮಾಜಿ ಸಚಿವ ಎಸ್.ಆರ್.ಪಾಟೀಲ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ರಾಷ್ಟ್ರೀಯ ನಾಯಕಿ ಆರತಿ ಕೃಷ್ಣ ಸೇರಿದಂತೆ ಹಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇದಲ್ಲದೇ, ನಿವೃತ್ತಿ ಆಗುತ್ತಿರುವ ಸದಸ್ಯರು ಹಾಗೂ ಇತ್ತೀಚೆಗೆ ನಿವೃತ್ತಿಯಾಗಿರುವ ಸದಸ್ಯರು, ಮಾಜಿ ಶಾಸಕರು ಮಾಜಿ ಸಚಿವರು ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಮೇಲ್ಮನೆ ಪ್ರವೇಶಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ತಂದಿದ್ದರು. ಇದೀಗ ಇವರೆಲ್ಲರೂ ತೀವ್ರ ಅಸಮಾಧಾನಗೊಂಡಿದ್ದಾರೆ.

ಬಿ ಫಾರಂ ವಿತರಣೆ: ಪಕ್ಷದ ಅಭ್ಯರ್ಥಿಗಳಾಗಿರುವ ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ "ಬಿ" ಫಾರಂ ನೀಡಿದ್ದಾರೆ. ಅಭ್ಯರ್ಥಿಗಳು ಇಂದು ವಿಧಾನಸೌಧದಲ್ಲಿ ವಿಧಾನಸಭಾ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಜೂನ್ 3ರಂದು ಚುನಾವಣೆ ನಡೆಯಲಿದ್ದು ಬಹುತೇಕ ಅವಿರೋಧ ಆಯ್ಕೆಯಾಗಲಿದೆ. ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಇಬ್ಬರನ್ನು ಗೆಲ್ಲಿಸಿಕೊಳ್ಳುವ ಶಾಸಕರ ಬಲವನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿದೆ.

ಇದನ್ನೂ ಓದಿ:ಪರಿಷತ್​ ಚುನಾವಣೆ: ಕಾಂಗ್ರೆಸ್​ನಿಂದ ಅಚ್ಚರಿಯ ಆಯ್ಕೆ..!

Last Updated : May 24, 2022, 11:57 AM IST

ABOUT THE AUTHOR

...view details