ಬೆಂಗಳೂರು: ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಕೊನೆಗಾಣಿಸಲು ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಇಂದು ಬಿಜೆಪಿ ಸೇರಿದ ಬಳಿಕ ಮಾತನಾಡಿದ ಅವರು, ಇದು ಪಕ್ಷಾಂತರ ಅಲ್ಲ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ 26 ಬಿಜೆಪಿಯ ಸಂಸದರು ಗೆದ್ದರಲ್ಲ. ಹಾಗಾದರೆ ಜನರೆಲ್ಲಾ ಪಕ್ಷಾಂತರವಾದರಾ? ಅಲ್ಲ, ಇದು ರಾಜಕೀಯ ದೃವೀಕರಣ ಎಂದು ಬಿಜೆಪಿ ಸೇರ್ಪಡೆ ನಿರ್ಧಾರವನ್ನು ವಿಶ್ವನಾಥ್ ವಿಶ್ಲೇಷಣೆ ಮಾಡಿದರು.
ಹೆಚ್.ವಿಶ್ವನಾಥ್, ಅನರ್ಹ ಶಾಸಕ ಇಂದು ರಾಜಕೀಯ ಪಕ್ಷಗಳು ವಿಫಲವಾಗಿವೆ. ಪಕ್ಷ ರಾಜಕಾರಣ ವಿಫಲವಾಗಿದೆ. ಹಾಗಾಗಿ ನಾವು ಪಕ್ಷ ಬಿಡಬೇಕಾಯಿತು. ಇಡೀ ದೇಶದಲ್ಲೇ ರಾಜಕೀಯ ದೃವೀಕರಣ ಆಗಿದೆ. ಅದರಂತೆ ಇಲ್ಲಿಯೂ ಆಗಿದೆ ಎಂದರು.
17 ಜನರಿಗೆ ಶಿಕ್ಷೆ ಕೊಡಲೇಬೇಕು ಎಂದು ಅಂದಿನ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್, ಜೆಡಿಎಸ್ ಸೇರಿಕೊಂಡು ರಾಜ್ಯ ರಾಜಕಾರಣದಿಂದ ನಮ್ಮನ್ನು ಹೊರಗಿಡಬೇಕು. ಯಾವ ಅಧಿಕಾರ ಸಿಗಬಾರದು. ಚುನಾವಣೆಗೆ ನಿಲ್ಲಬಾರದು ಎಂದು ಹುನ್ನಾರ ನಡೆಸಿದರು. ಆದರೆ ಅದನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಮೋದಿ ಹೊಸ ಕನಸುಗಳ ಅನ್ವೇಷಣೆಯಲ್ಲಿ ಇದ್ದಾರೆ. ಹಾಗಾಗಿ ಅವರಿಗಾಗಿ ಕೈ ಜೋಡಿಸಲು, ಅವರೊಟ್ಟಿಗೆ ಹೆಜ್ಜೆ ಹಾಕುವ ಸಲುವಾಗಿ ನಾವು ಬಿಜೆಪಿ ಸೇರಿದ್ದೇವೆ. ಬಿಎಸ್ವೈ, ಕಟೀಲ್ ಕಂಡ ಕನಸಿನ ಕರ್ನಾಟಕ ನಿರ್ಮಾಣಕ್ಕೆ ಅನರ್ಹ ಶಾಸಕರು ಬಿಜೆಪಿಗೆ ಬಂದಿದ್ದೇವೆ ಎಂದರು.