ಕರ್ನಾಟಕ

karnataka

ETV Bharat / city

ಸಕಾಲ ಯೋಜನೆಯಡಿ 20 ಕೋಟಿಗೂ ಹೆಚ್ಚು ಅರ್ಜಿಗಳ ವಿಲೇವಾರಿ: ಸುರೇಶ್‍ಕುಮಾರ್

ಸಕಾಲ ಯೋಜನೆಯಡಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಸುಮಾರು 20 ಕೋಟಿಗೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಕಾರ್ಮಿಕ ಹಾಗೂ ಸಕಾಲ ಸಚಿವ ಎಸ್. ಸುರೇಶ್​ ಕುಮಾರ್ ತಿಳಿಸಿದರು.

By

Published : Oct 28, 2019, 10:54 PM IST

ಸುರೇಶ್‍ಕುಮಾರ್

ಬೆಂಗಳೂರು: ಸಕಾಲ ಯೋಜನೆಯಡಿ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಸುಮಾರು 20 ಕೋಟಿಗೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸಚಿವ ಎಸ್. ಸುರೇಶ್​ ಕುಮಾರ್ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸೆಪ್ಟೆಂಬರ್ ತಿಂಗಳ ಸಕಾಲ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇದುವರೆಗೆ ಸಕಾಲ ಯೋಜನೆಯಡಿ 20,09,94,713 ಅರ್ಜಿಗಳನ್ನು ಸ್ವೀಕರಿಸಿದ್ದು, ಆ ಪೈಕಿ 20,02,84,447 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 25,76,030 ಅರ್ಜಿಗಳನ್ನು ಸ್ವೀಕರಿಸಿದ್ದು, ಆ ಪೈಕಿ 25,03,582 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಶೇ. 97.18ರಷ್ಟು ಗುರಿ ಸಾಧಿಸಲಾಗಿದೆ. ಸೆಪ್ಟೆಂಬರ್ ತಿಂಗಳ ಸಕಾಲ ಯೋಜನೆಯ ಮೌಲ್ಯಮಾಪನ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಹಾಸನ ಜಿಲ್ಲೆ ದ್ವಿತೀಯ ಸ್ಥಾನ ಹಾಗೂ ಶಿವಮೊಗ್ಗ ಜಿಲ್ಲೆ ತೃತೀಯ ಸ್ಥಾನ ಪಡೆದಿವೆ ಎಂದರು.

ಕಳಪೆ ಸಾಧನೆ ಮಾಡಿದ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆ 30ನೇ ಸ್ಥಾನ, ಬಾಗಲಕೋಟೆ ಜಿಲ್ಲೆ 29ನೇ ಸ್ಥಾನ ಹಾಗೂ ಬೀದರ್ ಜಿಲ್ಲೆ 28ನೇ ಸ್ಥಾನ ಪಡೆದಿವೆ ಎಂದು ಸಚಿವರು ತಿಳಿಸಿದರು. ಸಕಾಲ ಯೋಜನೆಯಡಿ ಕಾಲ್‍ ಸೆಂಟರ್ ತೆರೆಯಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ 60 ಸಾವಿರ ಕರೆಗಳನ್ನು ಸ್ವೀಕರಿಸಲಾಗಿದೆ. ಆನ್‍ಲೈನ್ ಮೂಲಕ ಸೇವೆಗಳನ್ನು ಒದಗಿಸುವ "ಸೇವಾ ಸಿಂಧು" ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ರಾಜ್ಯದಲ್ಲಿ ಸುಮಾರು 8 ಸಾವಿರ ಕೇಂದ್ರಗಳನ್ನು ತೆರೆಯಲಾಗಿದೆ. ಜನರ ಮನೆ ಬಾಗಿಲಿಗೆ ಹೋಗಿ ಸೇವೆ ಒದಗಿಸುವ "ಜನ ಸೇವಕ" ಕಾರ್ಯಕ್ರಮವನ್ನು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ವೃದ್ಧರಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ತಿಳಿಸಿದರು.

ಇನ್ನು ಸಕಾಲ ಯೋಜನೆಯಡಿ ತೊಡಗಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯಮಟ್ಟದ ಉತ್ತಮ ಅಧಿಕಾರಿಯೊಬ್ಬರಿಗೆ ಪ್ರಮಾಣ ಪತ್ರದ ಜೊತೆ 50 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಯೊಬ್ಬರಿಗೆ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು. ಈ ವೇಳೆ ಪ್ರಥಮ ಸ್ಥಾನ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಲತಾ ಅವರಿಗೆ ಪ್ರಶಂಸನಾ ಪತ್ರವನ್ನು ನೀಡಿದರು.

ABOUT THE AUTHOR

...view details