ಬೆಂಗಳೂರು: ರೈತರ ಪ್ರತಿಭಟನೆ ವೇಳೆ ಗಲಭೆಗೆ ಪ್ರಚೋದನೆ ನೀಡುವ ಮಾಹಿತಿಯುಳ್ಳ 'ಟೂಲ್ಕಿಟ್' ಅನ್ನು ಇಂಟರ್ನೆಟ್ಗೆ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರಿನ ದಿಶಾ ರವಿ ಹೆಸರಿನ ಯುವತಿಯನ್ನು ಬಂಧಿಸಿದ್ದಾರೆ. ಈಕೆ ಪರಿಸರ ಹೋರಾಟಗಾರ್ತಿ ಎಂದು ಹೇಳಲಾಗಿದೆ.
ಬೆಂಗಳೂರು ಮೂಲದ ದಿಶಾ ರವಿ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಈಕೆಯನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.
ಫ್ರೈಡೇ ಫಾರ್ ಫ್ಯೂಚರ್ ಎಂಬ ಸಂಘಟನೆಯ ಸ್ಥಾಪಕರಲ್ಲಿ ಒಬ್ಬಳಾದ ದಿಶಾ ರವಿ, ರೈತರ ಪ್ರತಿಭಟನೆಗೆ ವೇಳೆ ಗಲಭೆಗೆ ಕುಮ್ಮಕ್ಕು ನೀಡಿದ್ದಾರೆ ಮತ್ತು ಹಿಂಸಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚೋದನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿದೆ.