ಬೆಂಗಳೂರು: ನೆರೆಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆಗೆ ಹಣ ಸಾಲದೇ ಇದ್ದಲ್ಲಿ ಯಾವ ರೀತಿ ಫಂಡ್ ತರಬೇಕು, ಹೇಗೆ ಪರ್ಯಾಯ ಹಣಕಾಸು ವ್ಯವಸ್ಥೆ ಮಾಡಬೇಕು ಎನ್ನುವ ಕುರಿತು ಚಿಂತನೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ಶಾಸಕರ ಜೊತೆ ಸಿಎಂ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಾಸಕರ ಸಭೆಯನ್ನು ಸಿಎಂ ನಡೆಸಿದರು. ಪ್ರತಿ ಕ್ಷೇತ್ರದ ಸಮಸ್ಯೆಗಳನ್ನು ತಿಳಿದುಕೊಂಡು ಯಾವ ರೀತಿ ಮುಂದೆ ಹೆಜ್ಜೆ ಇಡಬೇಕೆಂದು ಚರ್ಚಿಸಲಾಯಿತು. ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ, ಎಲ್ಲೆಲ್ಲಿ ಕಾಮಗಾರಿಗಳು ನಿಂತಿವೆ ಎನ್ನುವ ಬಗ್ಗೆ ಚರ್ಚೆ ನಡೆಸಿದರು. ಪ್ರವಾಹ ಸಂತ್ರಸ್ತರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂದು ಚರ್ಚೆ ನಡೆಯಿತು ಎಂದರು.
ನೆರೆಹಾನಿ ಸಂಬಂಧ ಈ ಬಾರಿ ಬಹಳಷ್ಟು ಕೆಲಸವನ್ನು ಸರ್ಕಾರ ಮಾಡಿದೆ. ನಾನು ಕೂಡ ನೆರೆ ಪೀಡಿತ ಪ್ರದೇಶದಿಂದ ಬಂದಿದ್ದೇನೆ. ನೆರೆ ಪೀಡಿತರ ಕುಟುಂಬಕ್ಕೆ ತಕ್ಷಣವೇ ಹತ್ತು ಸಾವಿರ ರೂ.ಗಳನ್ನು ತಲುಪಿಸಲಾಗುತ್ತದೆ. ಮನೆಗಳನ್ನು ಕಟ್ಟಿಸಿ ಕೊಡಲು ಐದು ಲಕ್ಷ ರೂಪಾಯಿಗಳ ಹೇಳಿಕೆಯನ್ನು ಮುಖ್ಯಮಂತ್ರಿಗಳು ಈಗಾಗಲೇ ನೀಡಿದ್ದಾರೆ. ಮನೆ ಕಟ್ಟಲು, ಪಾಯ ಹಾಕಲು ಒಂದು ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕಂದಾಯ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಈ ಸಂಬಂಧ ಅಶೋಕ್ ಕೂಡ ಭರವಸೆ ನೀಡಿದ್ದಾರೆ ಎಂದರು.