ಕರ್ನಾಟಕ

karnataka

ಕಲಬೆರಕೆ ಖಾದ್ಯ ತೈಲ ದುಷ್ಪರಿಣಾಮ ಕುರಿತು ಪರಿಷತ್​ನಲ್ಲಿ ಗಂಭೀರ ಚರ್ಚೆ

By

Published : Mar 19, 2020, 10:07 PM IST

ಆಹಾರ ಪದಾರ್ಥದಲ್ಲಿ ಖಾದ್ಯ ತೈಲ ಕಲಬೆರಕೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದ್ದು, ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಮಿನರಲ್ ಆಯಿಲ್, ಪೆಟ್ರೋಲಿಯಂ ಕಚ್ಚಾ ಉತ್ಪನ್ನ ಬಳಸಲಾಗುತ್ತಿದೆ. ಇದರ ತಪಾಸಣೆಗೆ ಇಲಾಖೆ ಇದೆ. ಸೂಕ್ತ ಕಾನೂನು‌ ಇದೆ. ಆದರೆ ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

legislative council
ವಿಧಾನ ಪರಿಷತ್

ಬೆಂಗಳೂರು:ರಾಜ್ಯದಲ್ಲಿ ಬಳಸುವ ಖಾದ್ಯ ತೈಲದಲ್ಲಿ ಶೇ. 8-10ರಷ್ಟು ಮಾತ್ರ ಪರಿಶುದ್ಧ ತೈಲ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ನಿಯಮ 330ರ ಅಡಿ ದಿನಬಳಕೆ ಎಲ್ಲಾ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಕಲಬೆರಕೆ ಆಗುತ್ತಿರುವ ವಿಚಾರದ ಬಗ್ಗೆ ಸದನದ ಗಮನ ಸೆಳೆದ ಅವರು, ಶೇ. 90ರಷ್ಟು ಕಲಬೆರಕೆ ಆಗುತ್ತಿರುವುದು ವಿಪರ್ಯಾಸ. ಆಹಾರ ಪದಾರ್ಥದಲ್ಲಿ ಖಾದ್ಯ ತೈಲ ಕಲಬೆರಕೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದ್ದು, ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಮಿನರಲ್ ಆಯಿಲ್, ಪೆಟ್ರೋಲಿಯಂ ಕಚ್ಚಾ ಉತ್ಪನ್ನ ಬಳಸಲಾಗುತ್ತಿದೆ. ಇದರ ತಪಾಸಣೆಗೆ ಇಲಾಖೆ ಇದೆ. ಸೂಕ್ತ ಕಾನೂನು‌ ಇದೆ. ಆದರೆ ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಲಬೆರಕೆ ನಿಯಂತ್ರಿಸುವ ಕಾರ್ಯದಲ್ಲಿ ಇವು ಸಂಪೂರ್ಣ ವಿಫಲವಾಗಿವೆ. ಗಾಣಗಳನ್ನು‌ ಬಳಸಿ ಎಣ್ಣೆ ತೆಗೆಯಲಾಗುತ್ತಿತ್ತು. ಈಗ ಅದಿಲ್ಲ. ಒಂದು ಕೆಜಿ ಕಡಲೆಕಾಯಿ ಎಣ್ಣೆ ತಯಾರಿಸಲು ನಾಲ್ಕು ಕೆಜಿ‌ ಕಡಲೆ ಬೀಜ‌ ಬೇಕು. ಅದಕ್ಕೆ 415 ರೂ. ತಗುಲಲಿದೆ. ಆದರೆ ಇಂದು ಮಾರುಕಟ್ಟೆಯಲ್ಲಿ 120 ರೂ.ಗೆ ನೀಡುತ್ತಿದ್ದಾರೆ. 80-90 ರೂ.ಗೂ ಸಿಗುವುದನ್ನು ಕಾಣುತ್ತೇವೆ. ಇಂದು ಎಣ್ಣೆ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಕಲಬೆರಕೆ ಆಗುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಕಡಿವಾಣ ಹಾಕದಿದ್ದರೆ ದೊಡ್ಡ ದುರಂತಕ್ಕೆ ಕಾರಣವಾಗಲಿದೆ. ಕೋವಿಡ್ 19 ಮಾದರಿ ವೈರಾಣು ಯಾವುದಾದರೂ ಇದರಿಂದ ಹುಟ್ಟಿಕೊಳ್ಳಬಹುದು ಎಂದರು.

ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಜನರನ್ನು ನಿಧಾನವಾಗಿ ಸಾಯಿಸುವ ಕಾರ್ಯ ಕಲಬೆರಕೆ ಎಣ್ಣೆಗಳು ಮಾಡುತ್ತಿವೆ. ಉತ್ಪನ್ನಕ್ಕಿಂತ ಅರ್ಧ ಬೆಲೆಗೆ ಇಂದು ಖಾದ್ಯ ತೈಲ ಲಭಿಸುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಖಾದ್ಯ ತೈಲಗಳು ಬಳಕೆಗೆ ಯೋಗ್ಯವಲ್ಲ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಆವಿಷ್ಕಾರದ ಈ ದಿನದಲ್ಲಿ ವಿಜ್ಞಾನ ಬಳಸಿ ಎಂದು ಸಲಹೆ ನೀಡಿದರು.

ಆರ್.ಬಿ.ತಿಮ್ಮಾಪೂರ್ ಮಾತನಾಡಿ, ನಿಧಾನಗತಿಯ ವಿಷವನ್ನು ನಾವು ನಿತ್ಯ ಸೇವಿಸುತ್ತಿದ್ದೇವೆ. ಇಂತಹ ವಿಷ ನೀಡುವ ವ್ಯವಸ್ಥೆಯನ್ನು ಕೊಲ್ಲುವ ಸಮರ್ಪಕವಾದ ಒಂದು ಇಲಾಖೆ ಇಲ್ಲದಿರುವುದು ವಿಷಾದಕರ. ಇದಕ್ಕಾಗಿ ಪ್ರತ್ಯೇಕ ಇಲಾಖೆ ಮಾಡಿ. ಅಗತ್ಯ ಸಿಬ್ಬಂದಿ ನೇಮಿಸಿ. ಅಬಕಾರಿ ಇಲಾಖೆ ಮಾಡಿದಂತೆ ಇದಕ್ಕೂ ಒಂದು ಇಲಾಖೆ ಮಾಡಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಿ ಎಂದು ಸಲಹೆ ನೀಡಿದರು.

ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಪ್ರತಿ ಆಹಾರದ ಮೂಲಕ ನಾವು ಕಲಬೆರಕೆ ಆಹಾರ ಸೇವಿಸುತ್ತೇವೆ. ಕಾನೂನು ಸಮರ್ಪಕ ಅನುಷ್ಠಾನ ಆದಾಗ ಸಮಸ್ಯೆ ನಿವಾರಣೆ ಆಗಲಿದೆ. ಕಲಬುರಗಿ, ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ಕಲಬೆರಕೆ ಎಣ್ಣೆ ತಪಾಸಣೆಗೆ ಒಳಪಡಿಸುವ ಪ್ರಯೋಗಾಲಯ ಇದೆ. ಇವು ಇನ್ನಷ್ಟು ಹೆಚ್ಚಾಗಬೇಕು. ಕಾನೂನು ಬಲವಾಗಿದೆ. ಆದರೆ ಗಂಭೀರವಾಗಿ ಪರಿಗಣಿಸುವ ಕಾರ್ಯ ಆಗುತ್ತಿಲ್ಲ. ದೇಶದಲ್ಲೇ ಇದು ಆತಂಕ ಮೂಡಿಸುತ್ತಿದೆ. ಕೋವಿಡ್​ಗಿಂತ ಮಾರಕ ಅಂಶಗಳು ನಮ್ಮ ಶರೀರ ಸೇರುತ್ತಿವೆ. ಅಂಗಾಂಗಗಳನ್ನು ನಾಶಪಡಿಸುತ್ತಿವೆ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಬೆಳಗಾವಿ ಸಮೀಪದ ಗ್ರಾಮವೊಂದರಲ್ಲಿ ಸಂಪೂರ್ಣ ಸಸ್ಯಹಾರಿಗಳಿದ್ದಾರೆ. ದುರಂತ ಅಂದರೆ ರಾಸಾಯನಿಕ ಬೆರೆತ ಆಹಾರ, ತರಕಾರಿ ತಿಂದ ಪರಿಣಾಮ ಈಗ ಶೇ. 30ರಷ್ಟು ಮಂದಿ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಅದೊಂದು ದುರಂತ. ಇಂತಹ‌ ಹಲವು ಲೋಪಗಳಿವೆ. ಜನಪ್ರತಿನಿಧಿಗಳೆಲ್ಲಾ ಒಟ್ಟಾಗಿ ಜನಜಾಗೃತಿ ಮೂಡಿಸಬೇಕು. ರೈತನ ಮನೋಭಾವ ಬದಲಿಸುವ ಕಾರ್ಯ ಮಾಡಬೇಕಿದೆ. ಮಧ್ಯವರ್ತಿಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.

ಸಚಿವ ಬಿ. ಶ್ರೀರಾಮುಲು ಉತ್ತರ ನೀಡಿ, ಮೂರು ವರ್ಗೀಕರಣದಲ್ಲಿ ಕಲಬೆರಕೆ ಖಾದ್ಯ ತೈಲ ವಿಭಾಗಿಸಲಾಗಿದೆ. ಇವುಗಳ ವಿರುದ್ಧ 2011ರಲ್ಲಿ ಅಂದಿನ ಸರ್ಕಾರ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ ರಚಿಸಿದೆ. ನಾನು ಸಚಿವನಾದ ಮೇಲೆ ಪ್ರಾಧಿಕಾರಕ್ಕೆ ಐಎಎಸ್ ದರ್ಜೆಯ ಅಧಿಕಾರಿಯನ್ನು ಆಯುಕ್ತರನ್ನಾಗಿ‌ ನೇಮಿಸಿದ್ದೇನೆ. ಇದುವರೆಗೆ 37 ಮಾದರಿಯ ತುಪ್ಪ ತಪಾಸಣೆ ಮಾಡಿದ್ದೇವೆ. ಅಡುಗೆ ಎಣ್ಣೆ 359 ಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಮೂರು ವರ್ಷದಲ್ಲಿ 301 ಹೋಟೆಲ್ ಮೇಲೆ ದಾಳಿ ಆಗಿದ್ದು, 1.75 ಲಕ್ಷ ರೂ. ದಂಡ ವಿಧಿಸಿದ್ದೇವೆ. ಹಾಲಿಗೆ ಸಂಬಂಧಿಸಿ 86 ಮಾದರಿ ತಪಾಸಣೆ ಮಾಡಿ 7.69 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಹೊರ ರಾಜ್ಯದಿಂದ ಬರುವ ಕಲಬೆರಕೆ ಪದಾರ್ಥಗಳ ಬಗ್ಗೆ ಗಮನ ಸೆಳೆಯಲಾಗಿದೆ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಎಲ್ಲಾ ಸದಸ್ಯರು ನೀಡುವ ಸಲಹೆ ಪ್ರಮುಖ ಹೆಜ್ಜೆ ಇಡಲು ಸಹಕಾರಿಯಾಗಿದೆ. ಆಹಾರ ಕಲಬೆರಕೆ ವಿಚಾರದಲ್ಲಿ ಪ್ರಮುಖ ಹೆಜ್ಜೆ ಇಡಬೇಕಾಗಿದೆ. ಸಿಬ್ಬಂದಿ ಹೆಚ್ಚಿಸಿ ಹೆಚ್ಚು ಕ್ರಮ ಕೈಗೊಳ್ಳುತ್ತೇನೆ. ಕಲಬೆರಕೆ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾನೇ ಖುದ್ದು ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳುವ ಕಾರ್ಯ ಮಾಡುತ್ತೇನೆ. ಅಧಿಕಾರಿಗಳಿಗೆ ಟಾರ್ಗೆಟ್ ನೀಡುತ್ತೇನೆ ಎಂದರು.

ಇದಕ್ಕೆ ಸಭಾಪತಿಗಳು ಕೂಡ ಅನುಮೋದಿಸಿ, ಇಲ್ಲಿನ ಗಂಭೀರ ಸಮಸ್ಯೆಗೆ‌ ಕೈಗೊಳ್ಳುವ ಕ್ರಮದ ವಿವರ ನೀಡಿ ಎಂದು ಸಲಹೆ ಇತ್ತರು.

ABOUT THE AUTHOR

...view details