ಬೆಳಗಾವಿ: ವಿಧಾನ ಪರಿಷತ್ನಲ್ಲಿಂದು ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗಿ ಚರ್ಚೆ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಯಾವುದೇ ಕಾರಣಕ್ಕೂ ಬಿಟ್ ಕಾಯಿನ್ ವಿಚಾರವಾಗಿ ಸರ್ಕಾರದ ತನಿಖೆಯಲ್ಲಿ ಲೋಪ ಆಗಿಲ್ಲ. ಶ್ರೀಕಿಯನ್ನು ರಕ್ಷಣೆ ಮಾಡಿಲ್ಲ. ಪೊಲೀಸರು ಹೊಡೆದು, ಹಿಂಸಿಸಿಲ್ಲ. ತನಿಖೆ ಸಮರ್ಪಕವಾಗಿ, ಪಾರದರ್ಶಕವಾಗಿ ನಡೆದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಿಟ್ ಕಾಯಿನ್ ಕದಿಯಲು ಪೊಲೀಸರು ಶ್ರೀಕಿಯನ್ನು ಬಳಸಿಕೊಂಡಿದ್ದಾರೆ, ಡ್ರಗ್ಸ್ ನೀಡಿದ್ದಾರೆ ಎನ್ನುವುದು ಆಧಾರ ರಹಿತ ಆರೋಪ. ಬೆಂಗಳೂರು ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಶ್ರೀಕಿ ಸದ್ಯ ಆಚೆಗೆ ಇದ್ದು, ಯಾರು ಬೇಕಾದರೂ ಸಂಪರ್ಕಿಸಿ ಸಮಾಲೋಚನೆ ಮಾಡಬಹುದು. ಒಟ್ಟಾರೆ ಬಿಟ್ ಕಾಯಿನ್ ವಿಚಾರದ ತನಿಖೆಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಯು ಬಿ ವೆಂಕಟೇಶ್ ಅಸಮಾಧಾನ:
ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್, ಶ್ರೀಕಿ ಅವರ ತಂದೆ ತನ್ನ ಮಗನಿಗೆ ಡ್ರಗ್ಸ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕೀಯ ನಾಯಕರು ಭಾಗಿಯಾಗಿರುವ ಆರೋಪವೂ ಕೇಳಿ ಬಂದಿದೆ.