ಬೆಂಗಳೂರು :ಬಿಟಿಎಂ ಹಾಗೂ ಜಯನಗರ ಕ್ಷೇತ್ರಕ್ಕೆ ನಯಾಪೈಸೆ ಅನುದಾನ ಬಿಡುಗಡೆ ಮಾಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಿಎಂ ಕಚೇರಿ ಮುಂದೆ ಬುಧವಾರ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದೆ. ಒಂದೊಂದು ರೀತಿ ಅನುದಾನ ಕೊಟ್ಟಿದ್ದಾರೆ.
9 ಕಾಂಗ್ರೆಸ್ ಶಾಸಕರಿಗೆ 248 ಕೋಟಿ ರೂ. ಕೊಟ್ಟಿದ್ದರೆ, 15 ಬಿಜೆಪಿ ಶಾಸಕರಿಗೆ 1100 ಕೋಟಿ ರೂ. ಹಾಗೂ ಒಬ್ಬ ಜೆಡಿಎಸ್ ಶಾಸಕರಿಗೆ 125 ಕೋಟಿ ರೂ. ಕೊಡಲಾಗಿದೆ. ಆದರೆ, ಬಿಟಿಎಂ ಹಾಗೂ ಜಯನಗರ ಕ್ಷೇತ್ರಕ್ಕೆ ನಯಾ ಪೈಸೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಈ ಸಂಬಂಧ ಪಾಲಿಕೆ ಮುಖ್ಯ ಆಯುಕ್ತ ಹಾಗೂ ಆಡಳಿತಾಧಿಕಾರಿಯನ್ನು ಭೇಟಿ ನೀಡಿ ಮಾತನಾಡಿದ್ದೇನೆ. ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ನಾನು ಹಾಗೂ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಪ್ರತಿಭಟನೆ ಮಾಡ್ತೇವೆ. ಸೋಮವಾರ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಆಗಲೂ ಸಮಸ್ಯೆ ಬಗೆಹರಿಸಿಲ್ಲವಾದರೆ, ಬುಧವಾರದಂದು ಸಿಎಂ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.