ಬೆಂಗಳೂರು: ಸಹಾಯಹಸ್ತ ಪಾಸುಗಳ ವಿತರಣೆಯನ್ನು ಸ್ಥಗಿತಗೊಳಿಸುವಂತೆ ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರದ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದ ಕಾರ್ಮಿಕರಿಗೆ ಉಚಿತವಾಗಿ ಸಹಾಯಹಸ್ತ ಪಾಸುಗಳನ್ನು ವಿತರಿಸಲಾಗುತ್ತಿತ್ತು. ಇದೀಗ ಸಹಾಯಹಸ್ತ ಪಾಸುಗಳ ವಿತರಣೆಯನ್ನು ಸೂಕ್ತಾಧಿಕಾರಿಗಳ ನಿರ್ದೇಶನದಂತೆ ಜೂನ್ 1 ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸೂಚಿಸಿದೆ.
ಅಂದಹಾಗೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಬಸ್ಸುಗಳಲ್ಲಿ ಪ್ರಯಾಣಿಸಲು ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ನೀಡುವ ರಿಯಾಯಿತಿ ಬಸ್ ಪಾಸ್ ಇದಾಗಿದೆ. ಈ ಸೌಲಭ್ಯವು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಯಂ ಆಗಿ ವಾಸವಾಗಿರುವ ನೋಂದಾಯಿತ ನಿರ್ಮಾಣ ಕಾರ್ಮಿಕರು ಬೆಂಗಳೂರಿನಲ್ಲಿ ಕೆಲಸದ ಸ್ಥಳಕ್ಕೆ ಪ್ರಯಾಣಿಸಲು ಬಿಎಂಟಿಸಿ ಬಸ್ ಪಾಸ್ ಪಡೆಯಲು ಈ ನಿಯಮದಡಿ ಅರ್ಹರಾಗಿರುತ್ತಾರೆ.