ಬೆಂಗಳೂರು: ಧಾರವಾಡ ಜಿಲ್ಲೆಯ ನುಗ್ಗಿಕೇರಿ ಶ್ರೀ ಆಂಜನೇಯಸ್ವಾಮಿ ದೇಗುಲ ಬಳಿ ಹಿಂದೂಯೇತರ ಅಂಗಡಿ ಮೇಲೆ ದಾಳಿ ನಡೆಸಿರುವ ಘಟನೆಯನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗಿಕೇರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯವರು ನಡೆಸಿರುವ ಪುಂಡಾಟ ಹೇಯ ಮತ್ತು ಹೀನ ಕೃತ್ಯ. ಬಡ ಹಿಂದೂಯೇತರರೊಬ್ಬರ ಅಂಗಡಿ ನಾಶಪಡಿಸಿ ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿದ ಶ್ರೀರಾಮ ಸೇನೆಯವರು ಸಾಧಿಸಿದ್ದೇನು? ಅನ್ನಕ್ಕೆ ಕಲ್ಲು ಹಾಕುವುದು ಯಾವ ಧರ್ಮ? ಎಂದು ಪ್ರಶ್ನಿಸಿದ್ದಾರೆ.
ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮ ಸೇನೆಯವರು ನಡೆಸಿದ ದಾಂಧಲೆ ಭಯೋತ್ಪಾದನೆಗೆ ಸಮ. ಶ್ರೀರಾಮನ ತತ್ವಾದರ್ಶಗಳನ್ನು ನಿಜವಾಗಿ ಪಾಲಿಸುವವರು ಇಂತಹ ಕಿರಾತಕ ಕೆಲಸ ಮಾಡುವುದಿಲ್ಲ. ಶ್ರೀರಾಮ ಸೇನೆಯ ಕೃತ್ಯ ರಾಮನ ಹೆಸರಿಗೆ ಕಳಂಕ ತರುವ ಯತ್ನ. ದಾಂಧಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮರಸ್ಯ, ಸಹಬಾಳ್ವೆ ಮತ್ತು ಶಾಂತಿಗೆ ನಮ್ಮ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೀಗ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ರಾಜ್ಯ 'ಜಂಗಲ್ ರಾಜ್' ಆಗಿ ಬದಲಾಗುತ್ತಿದೆ. ಬೊಮ್ಮಾಯಿಯವರೇ, ಶಾಂತಿಯ ನಾಡಾಗಿದ್ದ ಕರ್ನಾಟಕವನ್ನು ನೀವೇನು ಮಾಡಲು ಹೊರಟ್ಟಿದ್ದೀರಿ? ಬಸವಣ್ಣ ಶರಣಾದಿ ಪರಂಪರೆಯಿಂದ ಬಂದ ನೀವು ಮಾಡುತ್ತಿರುವುದು ನಿಮಗೆ ಸಮ್ಮತವೇ? ಎಂದು ಕೇಳಿದ್ದಾರೆ.