ಬೆಂಗಳೂರು:ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಸಾಮರ್ಥ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಟ್ವೀಟ್ ಮೂಲಕ ಸಿಎಂ ಬಿಎಸ್ವೈ ಕಾಲೆಳೆದಿರುವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳೇ ನಿಮ್ಮದು ಬೆನ್ನು ಮೂಳೆಯಿಲ್ಲದ ಸರ್ಕಾರ ಎಂದು ಮತ್ತೊಮ್ಮೆ ಸಾಬೀತು ಮಾಡಿಬಿಟ್ರಿ!. ಅಲ್ಲಾ ಸ್ವಾಮಿ, ಕೇಂದ್ರದಿಂದ ನಮಗೆ ಬರಬೇಕಾದ ತೆರಿಗೆ ಪಾಲನ್ನು ಧೈರ್ಯವಾಗಿ ಕೇಳಲು ನಿಮ್ಮ ಸರ್ಕಾರಕ್ಕೆ ತಾಕತ್ತಿಲ್ಲವೆ? ನಿಮ್ಮ ಪುಕ್ಕಲುತನದಿಂದ ಮಾಡುವ ಸಾಲಕ್ಕೆ ರಾಜ್ಯದ ಜನರು ಹೊನ್ನಶೂಲಕ್ಕೇರಬೇಕೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರಗಳ ವಿರುದ್ಧ ನಿರಂತರ ವಾಗ್ದಾಳಿ:
ಎಐಸಿಸಿ ನೂತನ ಕಾರ್ಯಕಾರಿ ಸಮಿತಿಯ ಕಾಯಂ ಆಹ್ವಾನಿತರಾಗಿ ಹಾಗೂ ತಮಿಳುನಾಡು, ಪುದುಚೇರಿ ಹಾಗೂ ಗೋವಾ ರಾಜ್ಯಗಳ ಉಸ್ತುವಾರಿಯಾಗಿ ನೇಮಕಗೊಂಡಿರುವ ದಿನೇಶ್ ಗುಂಡೂರಾವ್, ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ನಿರಂತರ ವಾಗ್ದಾಳಿ ಆರಂಭಿಸಿದ್ದಾರೆ.
ಇನ್ನು ಕೋವಿಡ್ ಚಿಕಿತ್ಸೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ತೆರೆದಿದ್ದ ಕೋವಿಡ್ ಆರೈಕೆ ಕೇಂದ್ರ ಮುಚ್ಚಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋವಿಡ್ ಆರಂಭವಾದ ಸರ್ಕಾರದ ಒಂದಲ್ಲ ಒಂದು ಹಗರಣ ಬಯಲಾಗುತ್ತಲೇ ಇದೆ. ಬಿಐಇಸಿ ಆವರಣದಲ್ಲಿ ತೆರೆದಿದ್ದ ದೇಶದ ದೊಡ್ಡ ಕೋವಿಡ್ ಆರೈಕೆ ಕೇಂದ್ರಕ್ಕೆ ಬೀಗ ಬಿದ್ದಿದೆ. ಹಾಗಾದರೆ ಆರೈಕೆ ಕೇಂದ್ರ ತೆರೆದಿದ್ಯಾಕೆ? ಕೋಟ್ಯಂತರ ರೂ. ತೆರಿಗೆ ಹಣ ಖರ್ಚು ಮಾಡಿದ್ಯಾಕೆ? 'ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ' ಎಂದು ಲೇವಡಿ ಮಾಡಿದ್ದಾರೆ.