ಬೆಂಗಳೂರು:ಭಾರತ ಎಲ್ಲ ಜಾತಿಯವರಿಗೂ ಸೇರಿದ್ದು. ಆದರೆ, ಇಂದು ದೇಶದಲ್ಲಿ ಕೋಮುವಾದ ತಾಂಡವವಾಡುತ್ತಿದೆ. ಬಿಜೆಪಿ, ಸಂಘ ಪರಿವಾರ ಜನರಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಷಾದ ವ್ಯಕ್ತಪಡಿಸಿದರು.
ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಕೋಮುವಾದಿ ದೇಶ ಆಗಬಾರದು ಎಂದು ಅಂದು ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಎಲ್ಲ ಧರ್ಮ, ಜಾತಿಯವರನ್ನು ನ್ಯಾಯಯುತವಾಗಿ ನೋಡಿಕೊಳ್ಳಬೇಕು ಎಂಬುದು ಹೋರಾಟದ ಆಶಯವಾಗಿತ್ತು. ಕೋಮುವಾದಿಗಳು ಯಾರು ಈ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಆದರೆ, ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಕೋಮುವಾದ ನಿಯಂತ್ರಣವಾಗಲಿಲ್ಲ ಎಂದು ಬೇಸರ ಹೊರಹಾಕಿದರು.
ಕೋಮುವಾದದ ಸಿದ್ಧಾಂತಕ್ಕೆ ಪ್ರಚಾರ ಹಾಗೂ ಬೆಂಬಲ ಎರಡೂ ಸಿಗುತ್ತದೆ. ಇದೆಲ್ಲವನ್ನು ನಿಯಂತ್ರಿಸಬೇಕಾಗಿದೆ. ಜನರಲ್ಲಿ ದ್ವೇಷ ಸೃಷ್ಟಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಕಣ್ಣ ಮುಂದಿದೆ. ಎಸ್ಡಿಪಿಐ ರಾಜ್ಯದಲ್ಲಿ ಆತಂಕ ಸೃಷ್ಟಿಸುತ್ತಿದೆ. ಅದೇ ರೀತಿ ಸಂಘಪರಿವಾರದ ಕೆಲ ಸಂಘಟನೆಗಳು, ಬಜರಂಗದಳ ಹಾಗೂ ವಿಎಚ್ಪಿ ಕಾರ್ಯಕರ್ತರು ಕೂಡ ಸಾಕಷ್ಟು ಕೋಮುವಾದ ಹುಟ್ಟುಹಾಕುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಧರ್ಮವನ್ನು ಸಮನಾಗಿ ಕಾಣಬೇಕು. ಬೇರೊಂದು ಧರ್ಮವನ್ನು ದ್ವೇಷಿಸಬಾರದು ಎಂದರು.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ:
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಸಮಗ್ರ ತನಿಖೆ ಆಗಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಶಾಸಕರ ನಿವಾಸದ ಮೇಲೆ ದಾಳಿ ಮಾಡುವಂತಹ ಕೃತ್ಯವನ್ನು ಯಾರು ಸಹಿಸಲು ಸಾಧ್ಯವಿಲ್ಲ. ದಾಳಿಗೀಡಾದ ಶಾಸಕರು ಯಾವುದೇ ಪಕ್ಷದವರಾಗಿರಲಿ, ಇಲ್ಲಿ ಕಾನೂನಿನ ಉಲ್ಲಂಘನೆ ಆಗಿದೆ. ಅದನ್ನು ಖಂಡಿಸುತ್ತೇವೆ. ಅಖಂಡ ಶ್ರೀನಿವಾಸಮೂರ್ತಿ ನಿವಾಸಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದೇನೆ ಎಂದರು.