ಬೆಂಗಳೂರು:ಭಾರತವನ್ನು ಪುನರ್ ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಲು ಗಾಂಧಿವಾದಿ ಧರಂಪಾಲ್ ಅವರನ್ನು ಓದಿಕೊಳ್ಳಬೇಕು ಎಂದು ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ ಸೋನಿ ತಿಳಿಸಿದ್ದಾರೆ.
ಗಾಂಧಿವಾದಿ ಧರಂಪಾಲ್ ಅವರ ಜನ್ಮಶತಾಬ್ದಿ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಪ್ರಕಟಿಸಿರುವ, ‘ಧರಂಪಾಲ್ ಕ್ಲಾಸಿಕ್ ಸಿರೀಸ್’ ನ 5 ಪುಸ್ತಕಗಳನ್ನು ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ ಸೋನಿ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಧರಂಪಾಲ್ ಅವರು ಅಧ್ಯಯನ ನಡೆಸಿದ ಮತ್ತು ಅನುಭವಕ್ಕೆ ತಂದುಕೊಂಡದ್ದನ್ನು ಅನುಷ್ಠಾನಗೊಳಿಸುವುದು ಬಹಳ ಕಠಿಣ. ಏನನ್ನು ಕಲಿಸಲಾಗುತ್ತಿದೆಯೋ ಅದಕ್ಕೂ ಹಿಂದೆ ಇದ್ದದ್ದಕ್ಕೂ ಬಹಳ ವ್ಯತ್ಯಾಸವಿರುವುದನ್ನು ಧರಂಪಾಲ್ ಗ್ರಹಿಸಿದ್ದರು. ಬ್ರಿಟಿಷರು ಭಾರತಕ್ಕೆ ಬಂದಾಗ ಭಾರತ ಹೇಗಿತ್ತು ಎಂಬುದನ್ನು ಬ್ರಿಟಿಷರೇ ತಮ್ಮ ದಾಖಲೆಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ಧರಂಪಾಲ್ ಅಧ್ಯಯನ ಕೃತಿಗಳ ಮೂಲಕ ರಚಿಸಿದರು. ಅದನ್ನು ಓದುವಾಗ ಹೆಮ್ಮೆ ಮತ್ತು ದುಃಖ ಎರಡೂ ಏಕಕಾಲಕ್ಕಾಗುತ್ತದೆ. ಹಾಗಾಗಿಯೇ ಭಾರತವನ್ನು ಪುನರ್ ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಬೇಕು ಎಂದು ಧರ್ಮಪಾಲ್ ಹೇಳುತ್ತಿದ್ದರು ಎಂದು ಸುರೇಶ ಸೋನಿ ನೆನಪಿಸಿಕೊಂಡರು.
ಪ್ರಾಚೀನ ಭಾರತದಲ್ಲಿ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು. ಎಲ್ಲ ಸಮಸ್ಯೆಗಳನ್ನೂ ಗ್ರಾಮಸ್ಥರೇ ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಬ್ರಿಟಿಷರು ಬಂದ ನಂತರ ಪೊಲೀಸ್, ನ್ಯಾಯಾಲಯಗಳನ್ನು ಸ್ಥಾಪಿಸಿದರು. ಇಂದು ಮನುಷ್ಯನ ಜೀವನ ಬ್ರಿಟಿಷರ ವ್ಯವಸ್ಥೆಯ ಸುತ್ತವೇ ಸುತ್ತುತ್ತಿದೆ. ಭಾರತೀಯ ಸಮಾಜ ಕ್ರಾಂತಿಯ ಬದಲಿಗೆ ವಿಕಾಸವನ್ನು ತನ್ನದಾಗಿಸಿಕೊಂಡಿದೆ. ಏಕೆಂದರೆ ಕ್ರಾಂತಿಯಿಂದ ಹಿಂದಿನದ್ದು ನಾಶವಾಗುತ್ತದೆ. ಪ್ರಾಚೀನ ಭಾರತದಲ್ಲಿ ಜಾತಿ ಆಧಾರಿತ ಬೇಧಭಾವ ಇತ್ತು, ಮಹಿಳೆಯರಿಗೆ ಸ್ವಾತಂತ್ರ ಇರಲಿಲ್ಲ ಎಂಬ ಆರೋಪವಿದೆ. ಆದರೆ ದಾಖಲೆಗಳು ಬೇರೆಯದನ್ನೇ ಹೇಳುತ್ತದೆ ಎಂಬುದನ್ನು ಧರಂಪಾಲ್ ಸಾಬೀತುಪಡಿಸಿದ್ದಾರೆ ಎಂದು ಸುರೇಶ ಸೋನಿ ಅಭಿಪ್ರಾಯಪಟ್ಟರು.
ಗೀತಾ ಧರಂಪಾಲ್ ವಿಡಿಯೋ ಸಂದೇಶದ ಮೂಲಕ ಮಾತನಾಡಿ, ಧರಂಪಾಲ್ ಅವರ ಕೃತಿಗಳು ಭಾರತವನ್ನು ಮರು ಹುಡುಕುವಲ್ಲಿ ಮಹತ್ವದ್ದಾಗಿದೆ. ಪ್ರತಿಯೊಂದು ಜನಾಂಗಕ್ಕೆ ಅದರದ್ದೇ ಆದ ಉದ್ದೇಶವಿರುತ್ತದೆ ಎಂಬುದು ಧರಂಪಾಲ್ ಅವರ ಬಲವಾದ ನಂಬಿಕೆಯಾಗಿತ್ತು. ಭಾರತೀಯ ಜನಾಂಗದ ಉದ್ದೇಶವೇನು ಎಂಬುದನ್ನು ನಾವು ಕಂಡುಕೊಳ್ಳಬೇಕಿದೆ ಎಂದರು.
ಧರಂಪಾಲ್ ಅವರು ತಮ್ಮ 7ನೇ ವಯಸ್ಸಿನಲ್ಲೇ ಮಹಾತ್ಮ ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದರು. ಮನೆಯವರ ತೀವ್ರ ವಿರೋಧದ ನಡುವೆ ತಮ್ಮ ಬಿಎಸ್ಸಿ ಪದವಿಯನ್ನು ಮೊಟಕುಗೊಳಿಸಿ ಕ್ವಿಟ್ ಇಂಡಿಯಾ ಚಳುವಳಿಗೆ ಧುಮುಕಿದ್ದರು. ಆ ವೇಳೆ ಸೆರೆಮನೆವಾಸವಾಯಿತು. ಸೆರೆಯಿಂದ ಹೊರಬಂದ ನಂತರ ಚುಳುವಳಿಯಲ್ಲಿ ಸಕ್ರಿಯವಾಗದೆ ಉತ್ತರಾಖಂಡದ ಹಳ್ಳಿಯೊಂದರ ಉತ್ಥಾನಕ್ಕೆ ಕೆಲಸ ಮಾಡಿದರು. ಏಕೆಂದರೆ ಉತ್ತಮ ಭಾರತದ ನಿರ್ಮಾಣಕ್ಕೆ ಗ್ರಾಮೀಣ ಸಮುದಾಯ ಸಶಕ್ತವಾಗಬೇಕೆಂದು ಅರಿತಿದ್ದರು. ಭಾರತದ ವಿಭಜನೆ ವೇಳೆ ಪಾಕಿಸ್ಥಾನದಿಂದ ಬಂದಿದ್ದ ನಿರಾಶ್ರಿತರಿಗಾಗಿ ದುಡಿದರು. ಚೀನಾ ಜೊತೆಗಿನ ಸಂಬಂಧವನ್ನು ನಿಭಾಯಿಸುವಲ್ಲಿ ಅಂದಿನ ಪ್ರಧಾನಮಂತ್ರಿ ನೆಹರು ಅವರು ವಿಫಲರಾಗಿದ್ದಾರೆ, ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು 1962ರಲ್ಲಿ ಧರಂಪಾಲ್ ಸಂಸತ್ತಿಗೆ ಬಹಿರಂಗ ಪತ್ರ ಬರೆದಿದ್ದರು. ಪತ್ರ ಬರೆದ ಕಾರಣಕ್ಕಾಗಿ ಧರಂಪಾಲ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಿದರು. ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾದ ಅವಮಾನವದು ಎಂದು ಗೀತಾ ಧರಂಪಾಲ್ ಅಭಿಪ್ರಾಯಪಟ್ಟರು.
ವಿನೂತನ ಯೋಜನೆ:
2021-22 ಚಿಂತಕ, ಗಾಂಧಿವಾದಿ ಧರಂಪಾಲ್ ಅವರ ಜನ್ಮಶತಾಬ್ದಿ ವರ್ಷವಾಗಿದ್ದು, ಈ ಸಂದರ್ಭದಲ್ಲಿ ಅವರ ಸಾಹಿತ್ಯವನ್ನು ಜನರಿಗೆ ತಲುಪಿಸಿ, ತನ್ಮೂಲಕ ಗಾಂಧೀ ವಿಚಾರವನ್ನು ಹಾಗೂ ಭಾರತದ ನೈಜ ಇತಿಹಾಸವನ್ನು ತಿಳಿಸುವ ವಿನೂತನ ಯೋಜನೆಗೆ ಕೈ ಹಾಕಿರುವುದಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹೇಳಿಕೊಂಡಿದೆ.
ಈ ಸಂದರ್ಭದಲ್ಲಿ ಪುಸ್ತಕಗಳ ಸಂಪಾದಕರಾದ ಡಾ.ಜೆ.ಕೆ. ಬಜಾಜ್ ಮತ್ತು ಡಾ.ಎಂ.ಡಿ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕರಾದ ನಾಡೋಜ ಎಸ್ ಆರ್ ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ ಪಿ ಕುಮಾರ್ ಉಪಸ್ಥಿತರಿದ್ದರು.