ಬೆಂಗಳೂರು:ಪಿಎಸ್‌ಐ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ಕಾರಣ ಹುದ್ದೆ ಆಧಾರಿತ ಪದ್ಧತಿ ಅಳವಡಿಸಿ, ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ಮಾಡುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ತಮ್ಮ ಸುತ್ತೋಲೆಯಲ್ಲಿ ಪ್ರಸಕ್ತ ವಿದ್ಯಮಾನಗಳಲ್ಲಿ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಸ್ವಲ್ಪ ತಡವಾಗುವ ಸಂಭವವಿರುವುದರಿಂದ ಹುದ್ದೆಯಾಧಾರಿತ ಪದ್ಧತಿ ಅಳವಡಿಸಿ ತಮ್ಮ ವಲಯ/ಕಮೀಷನರೇಟ್ ಘಟಕಗಳಲ್ಲಿನ ಎಲ್ಲಾ ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡುವಂತೆ ತಿಳಿಸಿದ್ದಾರೆ.
ಜೊತೆಗೆ ಮುಂಬಡ್ತಿಗೆ ಅರ್ಹರಿರುವ, ಒಂದು ವರ್ಷದ ಅವಧಿಯಲ್ಲಿ ವಯೋ ನಿವೃತ್ತಿ ಹೊಂದಲಿರುವ, ವಯೋಮಿತಿ ಅಂಚಿನಲ್ಲಿರುವ ಎಎಸ್‌ಐಗಳಿಗೆ ಮುಂಬಡ್ತಿ ಹುದ್ದೆಗಳು ಇಲ್ಲದಿದ್ದಲ್ಲಿ ಅಂತಹ ಸಿಬ್ಬಂದಿಗೆ ಜೇಷ್ಟತೆ ಮತ್ತು ಮುಂಬಡ್ತಿಗೆ ಪರಿಗಣಿಸುವ ತೃಪ್ತಿಕರ ಸೇವೆಯನ್ನು ಆಧರಿಸಿಕೊಂಡು ನಿಯಮಗಳ ಅನುಸಾರ ನೇರ ನೇಮಕಾತಿ ಹುದ್ದೆಗಳಿಗೆ ಎದುರಾಗಿ ಕರ್ನಾಟಕ ನಾಗರೀಕ ಸೇವಾ ನಿಯಮ 32-ಅಡಿ ತಾತ್ಕಾಲಿಕವಾಗಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.