ದೊಡ್ಡಬಳ್ಳಾಪುರ : ಮುಜರಾಯಿ ಇಲಾಖೆಗೆ ಸೇರಿದ ದೊಡ್ಡಬಳ್ಳಾಪುರ ತಾಲೂಕಿನ ಪೆರಮಗೊಂಡನಹಳ್ಳಿಯ ಬಳಿಯ ದಿನ್ನೆ ಆಂಜನೇಯ ದೇವಸ್ಥಾನಕ್ಕೆ 900 ವರ್ಷಗಳ ಇತಿಹಾಸವಿದೆ. ದೊಡ್ಡಬಳ್ಳಾಪುರ ಸೇರಿದಂತೆ ಹೊರ ರಾಜ್ಯದವರು ಆಂಜನೇಯ ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನದಲ್ಲಿ ರಸ್ತೆ ಕಾಮಗಾರಿ ಸಹ ಪ್ರಾರಂಭವಾಗಿದೆ. ಆದರೆ ಇದೀಗ ರಸ್ತೆ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂದು ಹೇಳಿ ಕಾಮಗಾರಿಗೆ ಅರಣ್ಯ ಇಲಾಖೆ ತಡೆಯೊಡ್ಡಿದೆ.
ದೇವಸ್ಥಾನದ ಸುತ್ತಮುತ್ತ 30 ಎಕರೆ ಜಮೀನು ಇದ್ದು, ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ದೇವಸ್ಥಾನ ಮತ್ತು ಸಾಗುವಳಿ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ. ಈಗ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ಸಹ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೆರಳಿದ ಭಕ್ತರು ರಸ್ತೆಗೆ ಜೆಲ್ಲಿಕಲ್ಲು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.