ಬೆಂಗಳೂರು: ರಾಜ್ಯ ಸರ್ಕಾರವು ನಾಗರಿಕರ ದತ್ತಾಂಶ ಗೌಪ್ಯತೆ ಕಾಪಾಡಲು ಮತ್ತು ಸುರಕ್ಷಿತವಾಗಿ ಅದನ್ನು ಇತರೆ ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ವಿನೂತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಇ-ಸಹಮತಿ ತಂತ್ರಾಂಶವನ್ನು 'ನ್ಯಾಷನಲ್ ಇನ್‍ಫಾರ್ಮೇಟಿಕ್ ಸೆಂಟರ್' ಸಂಸ್ಥೆ (ಎನ್‍ಐಸಿ) ಅಭಿವೃದ್ಧಿ ಪಡಿಸಿದೆ. ಈ ತಂತ್ರಾಂಶದಲ್ಲಿ ಸೂಕ್ಷ್ಮ/ವೈಯುಕ್ತಿಕ ದತ್ತಾಂಶವನ್ನು ಸಂಬಂಧಪಟ್ಟ ನಾಗರಿಕರ ಸಹಮತಿ ಪಡೆದ ನಂತರ ನೋಂದಾಯಿತ ಖಾಸಗಿ ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ಉಪಯುಕ್ತವಾಗಿದೆ. ಶೀಘ್ರದಲ್ಲಿಯೇ ನಾಗರಿಕರ ಉಪಯೋಗಕ್ಕಾಗಿ ವಿನೂತನ ತಂತ್ರಾಂಶಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಇಂತಹ ಒಂದು ವಿಶಿಷ್ಟ, ವಿನೂತನವಾದ ತಂತ್ರಾಂಶವನ್ನು ರಾಜ್ಯ ಸರ್ಕಾರದಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಇಡೀ ದೇಶದಲ್ಲಿ ವಿನೂತನವಾಗಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ರಾಜ್ಯ ಸಚಿವರ ಸೂಚನೆ ಮೇರೆಗೆ ಇತರೆ ರಾಜ್ಯಗಳಿಗೂ ಸಹ ಈ ತಂತ್ರಾಂಶದ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ಈ ತಂತ್ರಾಂಶದ ಸೇವೆಯನ್ನು ಒದಗಿಸುವಂತೆ ತೆಲಂಗಾಣ ರಾಜ್ಯವು ಪತ್ರ ಬರೆದಿರುತ್ತದೆ ಎಂದು ತಿಳಿಸಿದರು.
ಇ- ಸಹಮತಿ ತಂತ್ರಾಂಶದಲ್ಲಿ ದತ್ತಾಂಶ ಒಡೆಯನು ತನ್ನ ದತ್ತಾಂಶವನ್ನು ನಿಗದಿತ ಉದ್ದೇಶಕ್ಕಾಗಿ ಬಳಸಲು ನೀಡಿರುವ ಸಹಮತಿಯಂತೆ, ಕೇವಲ ಉದ್ದೇಶಕ್ಕಾಗಿ ಮಾತ್ರ ದತ್ತಾಂಶ ಬಳಕೆಯು ಸೀಮಿತವಾಗಿದೆ. ಅವಶ್ಯವಿರುವ ದತ್ತಾಂಶವನ್ನು ಮಾತ್ರ ನಾಗರಿಕರಿಂದ ಪಡೆಯಲಾಗುವುದು. ದತ್ತಾಂಶದ ಬಳಕೆಗೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ದತ್ತಾಂಶ ಅವಶ್ಯಕತೆ ಇರುವವರಿಗೆ ಮಾತ್ರ ಬಳಸಿ ನಂತರ ಅಳಿಸಬಹುದಾಗಿದೆ. ಈ ದತ್ತಾಂಶವು ಸುರಕ್ಷಿತವಾಗಿ ನಿರ್ವಹಣೆಯಾಗಿರುತ್ತದೆ ಎಂದರು.
ರಾಜ್ಯದ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾ ಮಂಡಳಿ, 60ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳ ದತ್ತಾಂಶ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ವಿವಿಧ ಇಲಾಖೆ, ಅಂಗಸಂಸ್ಥೆಗಳಿಂದಲೂ ನಾಗರಿಕರ ದತ್ತಾಂಶಗಳನ್ನು ಪಡೆದುಕೊಳ್ಳಲಾಗುತ್ತದೆ.