ಬೆಂಗಳೂರು: ಡಿಸೆಂಬರ್ ತಿಂಗಳಿನಿಂದ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ 'ಕೊರೋನಾ' ವೈರಸ್ಗೆ ಸದ್ಯ ಯಾವುದೇ ಔಷಧ ಕಂಡುಹಿಡಿದಿಲ್ಲ. ಈ ಸಾಂಕ್ರಾಮಿಕ ವೈರಸ್ ಹಬ್ಬುತ್ತಿರುವ ಪರಿ ಯಾರಿಗಾದರೂ ಆತಂಕವುಂಟು ಮಾಡುವಂತಹದ್ದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.
130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿನ ಭೌಗೋಳಿಕ ಲಕ್ಷಣ, ಜನನಿಬಿಡತೆ, ವಿಶಿಷ್ಟ ಸಾಮಾಜಿಕ ನಡವಳಿಕೆಗಳಿರುವ ಸಂದರ್ಭದಲ್ಲಿ ಈ ಎರಡು ತಿಂಗಳಲ್ಲಿ ನಾಲ್ಕು ಸಾವು ಸಂಭವಿಸಿದ್ದು, ಸುಮಾರು 185 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ವ್ಯಾಪಕ ಜನಸಾಂದ್ರತೆಯಿರುವ ನಮ್ಮ ದೇಶದಲ್ಲಿ ಇಷ್ಟರಮಟ್ಟಿಗೆ ಈ ಮಹಾಮಾರಿಯನ್ನು ಕಟ್ಟಿಹಾಕುವಲ್ಲಿ ಕೇಂದ್ರ ಸರ್ಕಾರ ಮತ್ತು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳಿಗಾಗಿ ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.