ಬೆಂಗಳೂರು: ಜೆಡಿಎಸ್ ಪಕ್ಷದ ಅಧಿಕೃತ ವೆಬ್ಸೈಟ್ ಅನ್ನು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಇಂದು ಬಿಡುಗಡೆ ಮಾಡಿದರು.
ಜೆಡಿಎಸ್ ಪಕ್ಷದ ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಿದ ದೇವೇಗೌಡ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಪೂಜೆ ನೆರವೇರಿಸುವ ಮೂಲಕ ವೆಬ್ಸೈಟ್ ಅನ್ನು ಉದ್ಘಾಟಿಸಿದ ದೇವೇಗೌಡರು, ಪಕ್ಷದ ವೆಬ್ಸೈಟ್ ಅನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದ್ದೇವೆ. ಈ ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅವರೇ ಸ್ವತಃ ಒಂದು ವೆಬ್ಸೈಟ್ ಇಟ್ಟುಕೊಂಡಿದ್ದರು. ಇವತ್ತು ಪಕ್ಷದಿಂದ ಅಧಿಕೃತವಾಗಿ ವೆಬ್ಸೈಟ್ ಉದ್ಘಾಟಿಸಲಾಗಿದೆ. ಇದರಿಂದ ಪಕ್ಷದ ಕಾರ್ಯಕ್ರಮಗಳ ಕುರಿತಾದ ಪ್ರಚಾರಕ್ಕೆ ಅನುಕೂಲವಾಗಲಿದೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನತೆಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದರು.
ನಾವು ಸಾಮಾಜಿಕ ಜಾಲತಾಣ ಬಳಸುವಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದೆವು. ಆದರೆ ಈಗ ಹೊಸದೊಂದು ಯೋಜನೆ ಮಾಡಿದ್ದೇವೆ. ಹೀಗಾಗಿ ಇದರಿಂದ ಪಕ್ಷದ ಸಂಘಟನೆಗೆ ಅನುಕೂಲ ಆಗಲಿದೆ. ನಮ್ಮ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಅವರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಇದು ಪಕ್ಷದ ಹೆಸರಲ್ಲಿ ನಡೆಯುತ್ತದೆ. ಇದರಲ್ಲಿ ಯಾವುದೇ ನೂನ್ಯತೆಗಳು ಇಲ್ಲ. ನಾನು ಮತ್ತು ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇರುತ್ತಾರೆ. ಕಾರ್ಯಕರ್ತರ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೋನರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ವಿ ಹರೀಶ್, ಮುಖಂಡ ಜವರಾಯಿಗೌಡ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಮತ್ತಿತರರ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.