ಬೆಂಗಳೂರು:ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವಿಷಯ ಹಾಗೂ ಕಾಯ್ದೆಗಳ ಜನವಿರೋಧಿ ತಿದ್ದುಪಡಿ ವಿರುದ್ಧ ಜನಜಾಗೃತಿ ಮೂಡಿಸುವ ಮತ್ತು ಪಕ್ಷದ ಸಂಘಟನೆಯ ಕುರಿತು ಜೆಡಿಎಸ್ ವರಿಷ್ಠರೂ ಆಗಿರುವ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅವರು ರಾಜ್ಯದ ಎಲ್ಲಾ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಮುಖಂಡರ ಜೊತೆ ವಿಡಿಯೋ ಸಂವಾದ ನಡೆಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ವಿಡಿಯೋ ಸಂವಾದದ ಮೂಲಕ ಮಾತನಾಡಿದ ಅವರು, ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ನೀತಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಮುಖಂಡರು ಜೆಪಿ ನಗರದ ತಮ್ಮ ನಿವಾಸದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂವಾದದಲ್ಲಿ ಭಾಗವಹಿಸಿದ್ದರು. ಹಾಸನದಿಂದ ಸಂಸದ ಪ್ರಜ್ವಲ್ ರೇವಣ್ಣ, ರಾಮನಗರದಿಂದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಪಿ ಭವನದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಎಂಎಲ್ಸಿ ತಿಪ್ಪೇಸ್ವಾಮಿ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಸಂವಾದದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಹೆಚ್ಡಿಕೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಗೌಡರು ಸರ್ಕಾರಕ್ಕೆ ಒತ್ತಾಯಿಸಿದರು.
ಘಟನೆಗೆ ಕಾರಣ ಏನು, ಕಾಂಗ್ರೆಸ್ ಆಂತರಿಕ ವಿಚಾರದಿಂದ ಘಟನೆ ನಡೆದಿದೆಯೇ? ಎಂಬುದರ ಕುರಿತು ನಾನು ಹೆಚ್ಚಿಗೆ ಮಾತನಾಡಲ್ಲ. ಈ ಪ್ರಕರಣದಲ್ಲಿ 300ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಆದರೆ ನಿರಪರಾಧಿಗಳಿಗೆ ತೊಂದರೆ ಆಗಬಾರದು. ಸರ್ಕಾರ ಈ ಬಗ್ಗೆ ಯೋಚಿಸಬೇಕು. ಮ್ಯಾಜಿಸ್ಟ್ರೇಟ್ ತನಿಖೆಗೆ ಈ ಪ್ರಕರಣ ವಹಿಸಿದ್ದಾರೆ. ಇದರಿಂದ ಸತ್ಯಾಂಶ ಹೊರ ಬರಲು ಸಾಧ್ಯವಿಲ್ಲ. ಹಿಂದೆ ನಡೆದ ಹಲವು ಘಟನೆಗಳ ತನಿಖೆ ಏನಾಗಿದೆ ಎಂದು ನನಗೆ ಗೊತ್ತಿದೆ ಎಂದರು.
ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕೈಗಾರಿಕಾ ಕಾಯ್ದೆ ತಿದ್ದುಪಡಿ ಸಂಬಂಧ ಸುಗ್ರೀವಾಜ್ಞೆ ಹಿನ್ನೆಲೆಯಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ 30 ಜಿಲ್ಲೆಗಳಿಂದ ಭಾಗಿಯಾಗಿರುವ ಜೆಡಿಎಸ್ ಮುಖಂಡರ ಜೊತೆ ದೇವೇಗೌಡರು ಗಂಭೀರ ಚರ್ಚೆ ನಡೆಸಿದರು. ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ಮಾಡೋಣ ಎಂದು ಮುಖಂಡರಿಗೆ ಗೌಡರು ಸಲಹೆ ನೀಡಿದರು.
ಪ್ರತೀ ಜಿಲ್ಲೆಗಳಲ್ಲಿ ಮುಖಂಡರ ಜೊತೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳಿಗೆ, ನಂತರ ಸಿಎಂಗೂ ಮನವಿ ಪತ್ರ ಸಲ್ಲಿಸೋಣ ಎಂದು ದೇವೇಗೌಡರು ಕಾರ್ಯಕರ್ತರಿಗೆ ಕರೆ ನೀಡಿದರು. ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಶಾಸಕ ಸತ್ಯನಾರಾಯಣ ಹಾಗೂ ಮೃತಪಟ್ಟ ಕೊರೊನಾ ವಾರಿಯರ್ಸ್ಗೆ ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.