ಬೆಂಗಳೂರು: ಮಾಜಿ ಸಚಿವ ಚೆನ್ನಿಗಪ್ಪ ನಿಧನಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ನನ್ನನ್ನು ತೀವ್ರ ದುಃಖಕ್ಕೀಡು ಮಾಡಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನ್ನ ಕಟ್ಟಾ ಅಭಿಮಾನಿಯಾಗಿದ್ದ ಚೆನ್ನಿಗಪ್ಪ, ಗ್ರಾಮೀಣ ಜನರ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದರು.
ಸಾರ್ವಜನಿಕ ಸೇವಕರಾಗಿ ಜೊತೆಗೆ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದರು. ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದಾನ ಮಾಡಿದ್ದರು. ಅಷ್ಟೇ ಅಲ್ಲದೆ, ದೇವಸ್ಥಾನಗಳ ನಿರ್ಮಾಣ, ಅನ್ನದಾಸೋಹ ಮತ್ತು ಧಾರ್ಮಿಕ ಸೇವೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು.
ಸಂತಾಪ ವ್ಯಕ್ತಪಡಿಸಿದ ದೇವೇಗೌಡರು ಶಾಸಕರಾಗಿ, ಸಚಿವರಾಗಿ ನಾಡಿಗೆ ತಮ್ಮ ಸೇವೆ ಸಲ್ಲಿಸಿದ್ದರು. ಗ್ರಾಮೀಣ ಜನರ ದನಿ ಚೆನ್ನಿಗಪ್ಪ ನಿಧನದಿಂದ ನನ್ನ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿರುವ ಗೌಡರು, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.