ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಮುಂಗಾರು ಹಂಗಾಮಿನಲ್ಲಿ ವಾರ್ಷಿಕ ಗುರಿಯ ಶೇ.85 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.
2021-22 ನೇ ಸಾಲಿನಲ್ಲಿ ಸಮರ್ಪಕ ಹಂಚಿಕೆಯಾದ ಪೂರ್ವ ಮುಂಗಾರು ಮಳೆಯನ್ನು ನಿರೀಕ್ಷಿಸಿ 77 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಕೃಷಿ ಬೆಳೆಗಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಇದರಿಂದ 135.48 ಲಕ್ಷ ಟನ್ ಆಹಾರ ಧಾನ್ಯಗಳು ಮತ್ತು 15.23 ಲಕ್ಷ ಟನ್ ಎಣ್ಣೆ ಕಾಳುಗಳ ಉತ್ಪಾದನಾ ಗುರಿ ಇತ್ತು. ಈಗಾಗಲೇ 65.21 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ.
ಧಾರವಾಡ ಜಿಲ್ಲೆಯಲ್ಲಿ 2.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.115.76 ಗುರಿ ಸಾಧಿಸಲಾಗಿದೆ. ಇನ್ನು ಕೊಪ್ಪಳದಲ್ಲಿ 2.48 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ 2.98 ಲಕ್ಷ ಹೆಕ್ಟೇರ್ ಬಿತ್ತನೆ ಮಾಡುವ ಮೂಲಕ ಶೇ.118 ಗುರಿ ಬಿತ್ತನೆ ನಡೆದಿದೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ 3.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.112.74, ಗದಗ ಜಿಲ್ಲೆಯಲ್ಲಿ 2.83 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ.101.75 ಬಿತ್ತನೆ ಕಾರ್ಯ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಶೇ.102 ಹಾಗೂ ಬೀದರ್ ಜಿಲ್ಲೆಯಲ್ಲಿ ಶೇ.100.38 ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಇನ್ನು ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗಿರುವುದರಿಂದ ಆಹಾರ, ಕಾಳು ಮತ್ತು ವಾಣಿಜ್ಯ ಬೆಳೆಗಳಲ್ಲಿ ಹೆಚ್ಚಿನ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.
ಬಿತ್ತನೆ ಬೀಜ ದಾಸ್ತಾನು
ಈ ವರ್ಷ ಮುಂಗಾರು ಹಂಗಾಮಿಗೆ 6 ಲಕ್ಷ ಕ್ವಿಂಟಲ್ ಬಿತ್ತನೆ ಬೀಜಗಳ ಬೇಡಿಕೆ ಅಂದಾಜಿಸಲಾಗಿತ್ತು. ಈವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ 3.67 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಉಳಿದಂತೆ 53,402.98 ಕ್ವಿಂಟಾಲ್ ಬಿತ್ತನೆ ಬೀಜಗಳ ದಾಸ್ತಾನು ರಾಜ್ಯದ ಉಗ್ರಾಣ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿದೆ. 26.47 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿತ್ತು. ಇದುವರೆಗೆ 16.7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಮಾಡಲಾಗಿದೆ. 9 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸಿರಿಧಾನ್ಯ ಉತ್ಪಾದನೆ ಹೆಚ್ಚಿಸಲು ಹೊಸ ಕಾರ್ಯಕ್ರಮ ರೂಪಿಸಲು ಸರ್ಕಾರ ಚಿಂತನೆ
ರಾಜ್ಯದಲ್ಲಿ 0.32 ಲಕ್ಷ ಟನ್ ಯೂರಿಯ ಬಫರ್ ಸ್ಟಾಕ್
ರಾಜ್ಯದಲ್ಲಿ ಕಳೆದ ವರ್ಷದ ಖಾರಿಫ್‌ನಲ್ಲಿ ನಿರೀಕ್ಷೆಗೂ ಮೀರಿ ಸುಮಾರು 77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದಾಖಲೆಯ ಪ್ರಮಾಣದಷ್ಟು ಬಿತ್ತನೆ ಆಗಿತ್ತು. ಈ ಬಾರಿಯೂ ಕೂಡ ಬೇಗನೆ ಬಿತ್ತನೆಯಾಗಿದ್ದು, ಕೃಷಿ ಚಟುವಟಿಕೆ ಚುರುಕು ಪಡೆದಿದೆ. ಪ್ರಸಕ್ತ ವರ್ಷದಲ್ಲಿ, ಬಿತ್ತನೆಯ ಪ್ರದೇಶದಲ್ಲಿ ದಾಖಲೆಯ ಹೆಚ್ಚಳ ಮತ್ತು ಸಾಮಾನ್ಯ ಮಳೆಗಿಂತ ಅಧಿಕ ಮಳೆ ಆಗಿದೆ. ರಾಜ್ಯಗಳ ಯೂರಿಯಾದ ಅವಶ್ಯಕತೆಯೂ ಅನುಗುಣವಾಗಿ ಹೆಚ್ಚಾಗಿದೆ. ರಾಜ್ಯದಲ್ಲಿ ಸದ್ಯ 0.32 ಲಕ್ಷ ಟನ್ ಯೂರಿಯ ಬಫರ್ ಸ್ಟಾಕ್ ಇದೆ. ಈ ವರ್ಷದಲ್ಲಿ ಆಗಸ್ಟ್ ಮೊದಲ ವಾರದವರೆಗೆ ಯೂರಿಯಾ ಪೂರೈಕೆಯು 6.18 ಲಕ್ಷ ಮೆಟ್ರಿಕ್ ಟನ್ ಆಗಿದೆ. ಈ ಬಾರಿಯೂ ಸಹ ಯಾವುದೇ ರೀತಿಯ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳುವಂತೆ, ಕರ್ನಾಟಕ ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗಳಿಗೆ ಉತ್ತೇಜನ ಮಾಡಲು ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಬೇಕು. ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ಹೆಚ್ಚು ಉತ್ತೇಜನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮನವಿ ಮಾಡಿದ್ದಾರೆ.
ಈ ನಡುವೆ ಬೆಂಬಲ ಬೆಲೆಯಲ್ಲಿ ಹೆಸರು ಕಾಳು, ಉದ್ದು ಖರೀದಿಗೆ ಕೇಂದ್ರದಿಂದ ಅನುಮತಿ ಸಿಕ್ಕಿದೆ. ಕರ್ನಾಟಕದಲ್ಲಿ 2021-22ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಖರೀದಿಗೆ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ಅನುಮತಿ ನೀಡಿದೆ. ಗರಿಷ್ಠ 30 ಸಾವಿರ ಮೆಟ್ರಿಕ್ ಟನ್ ಹೆಸರು ಹಾಗೂ ಗರಿಷ್ಠ 10 ಸಾವಿರ ಮೆಟ್ರಿಕ್ ಟನ್ ಉದ್ದು ಖರೀದಿಗೆ ಅನುಮತಿ ನೀಡಲಾಗಿದ್ದು, ರಾಜ್ಯ ಸರ್ಕಾರ ನಿಗದಿ ಪಡಿಸುವ ದಿನಾಂಕದಿಂದ 90 ದಿನಗಳ ಅವಧಿಗೆ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ.