ಬೆಂಗಳೂರು :ಕನ್ನಡ ರಾಜ್ಯೋತ್ಸವದ ಈ ಪುಣ್ಯ ದಿನದಂದು ಕನ್ನಡ ಧ್ವಜವನ್ನು ಹಾರಿಸುವುದು ಅಂದರೆ ಪರಮ ಧನ್ಯತೆಯ ಅನುಭವ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಈ ಕನ್ನಡ ಸಂಭ್ರಮ ಮನೆಮನೆಯಲ್ಲೂ ಕಾಣಲಿ, ಪ್ರತಿಮನೆಯಲ್ಲೂ ಕನ್ನಡ ಬೆಳಗಬೇಕು ಎಂದು ಆಶಿಸಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಗರದ ಮಲ್ಲೇಶ್ವರಂ ಕ್ಷೇತ್ರದ ಮಲ್ಲೇಶ್ವರದ ಸಂಗೊಳ್ಳಿ ರಾಯಣ್ಣ ಪಾರ್ಕ್ ಮತ್ತು ಕೆಂಪೇಗೌಡ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನವೆಂಬರ್ 1 ನಮ್ಮೆಲ್ಲರ ಹಬ್ಬ. ಈ ಕನ್ನಡದ ಹಬ್ಬವನ್ನು ಜಗತ್ತಿನ ಉದ್ದಗಲಕ್ಕೂ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗರ ಮನೆಯಲ್ಲೂ ಸಂಭ್ರಮವಾಗಲಿ. ಕನ್ನಡ ಮತ್ತು ಕರ್ನಾಟಕ ಕೀರ್ತಿ ಇನ್ನೂ ಹೆಚ್ಚಲಿ ಎಂಬುದೇ ನನ್ನ ಪ್ರಾರ್ಥನೆ ಎಂದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಮ್ಮ ರಾಜ್ಯ ಚದುರಿ ಹೋಗಿತ್ತು. ಹಾಗೆ ಚದುರಿದ್ದ ಕರ್ನಾಟಕ, ಏಕೀಕರಣವಾದ ಐತಿಹಾಸಿಕ ದಿನ ಇದಾಗಿದೆ. ಇಂತಹ ದಿನದಂದು ಸಾಧಕರನ್ನು ಗುರುತಿಸಿ ಗೌರವಿಸುವುದು ಕೂಡ ದೊಡ್ಡ ಸಂಭ್ರಮವೇ ಆಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು.
ಸಾಧಕರಿಗೆ ಸನ್ಮಾನ :ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಅವರು, ಸಂಗೊಳ್ಳಿ ರಾಯಣ್ಣ ಪಾರ್ಕ್ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮೇಯರ್ ಹುಚ್ಚಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಹನುಮಂತಪ್ಪ, ಕೆ ಹೆಚ್ ರಾಮಯ್ಯ, ಸಿ.ಕೃಷ್ಣಪ್ಪ, ಡಾ.ವಾಸನ್, ಗುರುರಾಜ್, ಡಾ.ಆಂಜಿನಪ್ಪ, ಸಿ.ಚಂದ್ರಶೇಖರ್, ತ್ಯಾಗರಾಜ ಗೌಡ, ಮಾರ್ಗಬಂಧು, ಗಂಗಾಧರ್, ಕೆ ಪಿ ಕಲಾಯೋಗಿ, ಮಹದೇವ ರಾವ್, ಚೆನ್ನಣ್ಣ (ಡಾ.ರಾಜ್‌ಕುಮಾರ್ ಅವರ ಒಡನಾಡಿ), ಶಾಂತಾರಾಮ್, ಗುರು ಗಂಗಾಧರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕೆಂಪೇಗೌಡ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಾದ ಡಾ.ಪಿ ಆರ್ ಎಸ್ ಚೇತನ್, ಕುಮಾರಿ ಚೈತ್ರಶ್ರೀ ಎಂ, ಡಾ.ಟಿ ಹೆಚ್ ಅಂಜಿನಪ್ಪ, ಸಿ ಎಲ್ ಮರಿಗೌಡ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಎರಡೂ ಕಾರ್ಯಕ್ರಮಗಳ ನೇತೃತ್ವವನ್ನು ಸಮಾಜ ಸೇವಕ ಸುರೇಶ್ ಗೌಡ ವಹಿಸಿದ್ದರು. ವಾಯುವಿಹಾರಿಗಳು ಸೇರಿದಂತೆ ಸಹಸ್ರಾರು ಸ್ಥಳೀಯ ಕನ್ನಡಾಭಿಮಾನಿಗಳು ಪಾಲ್ಗೊಂಡು ಕನ್ನಡ ಹಬ್ಬದಲ್ಲಿ ಭಾಗಿಯಾದರು.