ಬೆಂಗಳೂರು:ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಅತಿಯಾಗಿ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಹವಾಮಾನ ಇಲಾಖೆಯ ತಜ್ಞ ಸದಾನಂದ ಅಡಿಗ ಮಾತನಾಡಿ, ಮುಂದಿನ 5 ದಿನದ ಮಳೆ ಮುನ್ಸೂಚನೆ ಪ್ರಕಾರ, ಕರಾವಳಿ ಭಾಗದಲ್ಲಿ 3 ದಿನ ವ್ಯಾಪಕವಾಗಿ ಮಳೆಯಾಗಲಿದೆ. ಶುಕ್ರವಾರ ಮತ್ತು ಶನಿವಾರ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ. ನಂತರದ 2 ದಿನ ವಿವಿಧೆಡೆ ಮಳೆಯಾಗಲಿದೆ ಎಂದರು.
ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲೂ ಯಲ್ಲೋ ಅಲರ್ಟ್ (Yellow alert) ಕೊಡಲಾಗಿದೆ. ಶನಿವಾರವೂ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳಲ್ಲೂ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಮೊದಲ 3 ದಿನ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ದಕ್ಷಿಣ ಒಳನಾಡಿನ ಬಳ್ಳಾರಿ ಜಿಲ್ಲೆ ಹೊರತುಪಡಿಸಿ ಮತ್ತೆಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕೊಡಲಾಗಿದೆ. ಬಳ್ಳಾರಿ ಜಿಲ್ಲೆಗೆ ಯಲ್ಲೋ ಅಲರ್ಟ್ ಕೊಡಲಾಗಿದೆ. ನಾಳೆ ಹಾಗೂ ನಾಡಿದ್ದು, ಬೆಂಗಳೂರು, ಚಿತ್ರದುರ್ಗ, ರಾಮನಗರ, ದಾವಣಗೆರೆ, ತುಮಕೂರು ಹಾಗೂ ಪಶ್ಚಿಮ ಘಟ್ಟದ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್ ಇರಲಿದ್ದು, ಶನಿವಾರ ಯಲ್ಲೋ ಅಲರ್ಟ್ ಇರಲಿದೆ. ಗುಡುಗಿನಿಂದ ಮಳೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಎಲ್ಲೆಲ್ಲಿ, ಎಷ್ಟು ಮಳೆ?:
ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 17 ಸೆಂಮೀ, ತುಮಕೂರಿನ ಗುಬ್ಬಿಯಲ್ಲಿ 15 ಸೆಂ.ಮೀ, ಎಲೆಕ್ಟ್ರಾನಿಕ್ ಸಿಟಿಯಲ್ಲಿ 12 ಸೆಂ.ಮೀ, ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ 12 ಸೆಂ.ಮೀ, ಕೋಲಾರದ ಶ್ರೀನಿವಾಸಪುರ ಹಾಗೂ ಮುಳಬಾಗಿಲಲ್ಲಿ 11 ಸೆಂ.ಮೀ, ಬೆಂ.ಗ್ರಾಮಾಂತರ 10 ಸೆಂ.ಮೀ, ಚಿಕ್ಕನಹಳ್ಳಿಯಲ್ಲಿ 10 ಸೆಂ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಸಾವಿರಾರು ಹೆಕ್ಟೇರ್ ಬೆಳೆ ನಾಶ, ಕೋಟ್ಯಂತರ ರೂಪಾಯಿ ನಷ್ಟ:
ಮಳೆಯಿಂದಾಗಿ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಹಾನಿಯಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಹಾನಿಗೀಡಾಗಿವೆ. ಕೋಲಾರ ಜಿಲ್ಲೆಯೊಂದರಲ್ಲೇ 36 ಸಾವಿರ ಹೆಕ್ಟೇರ್ ರಾಗಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. 1370 ಹೆಕ್ಟೇರ್ ಟೊಮೆಟೋ ಹಾಗೂ ತರಕಾರಿ, ಸೊಪ್ಪು ಜಮೀನಿನಲ್ಲೇ ಕೊಳೆಯುತ್ತಿವೆ. ರಾಗಿ, ಜೋಳ, ನೆಲಗಡಲೆ, ಭತ್ತ, ತೊಗರಿ, ಸೇರಿದಂತೆ 34,554 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದೆ.
ತುಮಕೂರಿನಲ್ಲಿ 14500 ಸಾವಿರ ಹೆಕ್ಟೇರ್ ಬೆಳೆ ಹಾನಿ, ಚಿಕ್ಕಬಳ್ಳಾಪುರದಲ್ಲಿ 905.25 ಹೆಕ್ಟೇರ್ ತೋಟಗಾರಿಕೆ ಬೆಳೆಗಳು, ಬೆಳಗಾವಿ ಜಿಲ್ಲೆಯಲ್ಲಿ 2,150 ಹೆಕ್ಟೇರ್ ಭತ್ತದ ಬೆಳೆ, ಉತ್ತರ ಕನ್ನಡ ಜಿಲ್ಲೆ, ಕರಾವಳಿ, ಘಟ್ಟದ ಮೇಲಿನ ತಾಲೂಕುಗಳಲ್ಲಿ 894.9 ಹೆಕ್ಟೇರ್ ಪ್ರದೇಶದ ಭತ್ತ ನಾಶವಾಗಿದೆ. ಮೆಕ್ಕೆಜೋಳವೂ ಮಳೆನೀರಿಗೆ ಹಾನಿಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಬಿಡುವು ನೀಡದ ಕಾರಣ 78,100 ಹೆಕ್ಟೇರ್ ಭತ್ತ, 52 ಸಾವಿರ ಹೆಕ್ಟೇರ್ ಮೆಕ್ಕೆಜೋಳಕ್ಕೆ ಹಾನಿಯಾಗಿದೆ. ಮಳೆಯಿಂದಾಗಿ 78 ಹೆಕ್ಟೇರ್ ಭತ್ತದ ಬೆಳೆ, 13 ಹೆಕ್ಟೇರ್ ಮೆಕ್ಕೆಜೋಳ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಕಿರಣ್ ಕುಮಾರ್ ಮಾಹಿತಿ ನೀಡಿದ್ದಾರೆ.