ಬೆಂಗಳೂರು: ವಾರದಿಂದ ಬೆಂಗಳೂರು ನಗರ ಮುಸುಕಿನ ವಾತಾವರಣದಿಂದ ಕೂಡಿದ್ದು, ಗಂಟೆಗೆ ಒಮ್ಮೆಯಂತೆ ಆಗಾಗ ಮಳೆರಾಯ ಎಂಟ್ರಿ ಕೊಡುತ್ತಿದ್ದಾನೆ. ದಿಢೀರ್ ಅಂತ ಸುರಿಯುತ್ತಿರುವ ಮಳೆಯಿಂದಾಗಿ ಈಗ ನಗರದೆಲ್ಲೆಡೆ ಡೆಂಗ್ಯೂ ಭೀತಿ ಹೆಚ್ಚಿದೆ.
ಕಳೆದ ಹಲವು ತಿಂಗಳಿಂದ ಡೆಂಗ್ಯೂ ಜ್ವರದ ಪ್ರಕರಣಗಳು ಕಡಿಮೆಯಾಗಿದ್ದವು. ಈಗ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ಡೆಂಗ್ಯೂ, ಚಿಕನ್ ಗುನ್ಯಾ ಹರಡುವ ಆತಂಕ ಶುರುವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದು, ಡೆಂಗ್ಯೂ ಪ್ರಕರಣ ಅಧಿಕವಿರುವ ತುಮಕೂರು, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.