ಬೆಂಗಳೂರು :ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಶುಕ್ರವಾರದ ಕಲಾಪ ಬಲಿಯಾಯಿತು. ಕಾಂಗ್ರೆಸ್, ಬಿಜೆಪಿ ಸದಸ್ಯರ ವಾಗ್ವಾದ, ಆರೋಪ-ಪ್ರತ್ಯಾರೋಪಗಳ ಘೋಷಣೆ ಮೊಳಗಿ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು.
ಬೆಳಗಿನ ಕಲಾಪ ಆರಂಭಗೊಳ್ಳುತ್ತಿದ್ದಂತೆ ಈಶ್ವರಪ್ಪ ವಿಷಯದ ಗದ್ದಲ ಆರಂಭಗೊಂಡಿದ್ದರಿಂದ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು. ಮುಂದೂಡಿಕೆಯಾಗಿದ್ದ ಕಲಾಪ ಪುನಾರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಸರ್ಕಾರದಿಂದ ಕ್ರಮದ ಭರವಸೆ ಸಿಗುವವರೆಗೂ ಧರಣಿ ಬಿಡಲ್ಲ. ಈಶ್ವರಪ್ಪ ವಜಾ ಆಗಲೇಬೇಕು ಎಂದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಪ್ರಧಾನಿ ಮೋದಿಗೆ ಧಿಕ್ಕಾರ ಹಾಕಿದ್ದು ಸಂವಿಧಾನ ವಿರೋಧಿ. ಸಲೀಂ ಅಹಮದ್ ಅವರನ್ನು ಸದನದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಬೇಡಿಕೆಗೆ ಕಿಡಿಕಾರದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಮೋದಿಗೆ ಧಿಕ್ಕಾರ ಕೂಗೋದು ಸಂವಿಧಾನ ವಿರೋಧಿ ಅಲ್ಲ, ಅದು ಪ್ರಜಾಪ್ರಭುತ್ವ. ಹಿಂದೆ ಅಮಿತ್ ಶಾರನ್ನು ಗಡಿಪಾರು ಮಾಡಿದ್ದರು. ಕೊಲೆ ಕೇಸ್ನಲ್ಲಿ ಗಡಿಪಾರು ಮಾಡಲಾಗಿತ್ತು. ಅಂತವರಿಗೆ ಧಿಕ್ಕಾರ ಕೂಗುವುದು ತಪ್ಪಲ್ಲ ಎಂದು ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ್ದನ್ನು ಸಮರ್ಥಿಸಿದರು.
ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರಿಂದ ಪರ- ವಿರೋಧಿ ಘೋಷಣೆ ಮೊಳಗಿತು. ಭಿತ್ತಿಪತ್ರ ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ಪರಿಸ್ಥಿತಿ ತಿಳಿಗಿಳಿಸಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೀಠದಿಂದ ಎದ್ದು ನಿಂತ ಸಭಾಪತಿ ಹೊರಟ್ಟಿ ಅವರು, ಸದನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಸದನ ಸರಿಯಾಗಿ ನಡೆಸಬೇಕು ಎನ್ನುವ ಸದುದ್ದೇಶದಿಂದ ಹೊರಟಿದ್ದೇವೆ. ಸದನದಲ್ಲಿಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಬೇಡ, ಅವರು ಇಲ್ಲಿ ಬಂದು ಸಮರ್ಥನೆ ಮಾಡಿಕೊಳ್ಳಲು ಆಗಲ್ಲ. ಹಾಗಾಗಿ, ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪಿಸದೆ ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದರು.
ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ, ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಬಗ್ಗೆ ಹಗುರವಾಗಿ ಮಾತನಾಡುವುದೂ ಸಲ್ಲದು, ಉತ್ತಮ ಪರಂಪರೆ ಹಾಕಲು ಎರಡೂ ಕಡೆ ಸಹಕಾರ ನೀಡಬೇಕು. ಘಟನೆ ನನಗೆ ನೋವಾಗಿದೆ. ಸದನದಲ್ಲಿ ಇಲ್ಲದ ವ್ಯಕ್ತಿಗಳ ಬಗ್ಗೆ ಮಾತನಾಡಿದ ಎರಡು ಕಡೆಯ ಹೆಸರುಗಳನ್ನು ಕಡತದಿಂದ ತೆಗೆದು ಹಾಕಿ ರೂಲಿಂಗ್ ನೀಡಿ ಧಿಕ್ಕಾರ ಪ್ರಹಸನಕ್ಕೆ ತೆರೆ ಎಳೆದರು.
ಬಳಿಕ ಮಾತನಾಡಿದ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ನಾವು ಸದನದಲ್ಲಿ ಇಲ್ಲದ ವ್ಯಕ್ತಿಗಳ ಹೆಸರು ಪ್ರಸ್ತಾಪ ಮಾಡಲಿಲ್ಲ. ಈಶ್ವರಪ್ಪನವರ ವಿಚಾರ ಮಾತ್ರ ಪ್ರಸ್ತಾಪ ಮಾಡಿದ್ದೇವೆ. ಮೊದಲು ವಿವಾದ ಆರಂಭಿಸಿದ್ದೇ ಬಿಜೆಪಿಯವರು ಎಂದರು.