ದೊಡ್ಡಬಳ್ಳಾಪುರ:ಬೆಂಗಳೂರು ಮಹಾನಗರದ ಕಸ ಬೆಂಗಳೂರು ಗ್ರಾಮೀಣ ಜನರಿಗೆ ವಿಷವಾಗಿದೆ. ಬಿಬಿಎಂಪಿ ತ್ಯಾಜ್ಯವನ್ನ ತಂದು ಭಕ್ತರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯಲಾಗುತ್ತಿದೆ. ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡದೇ ಇರುವುದರಿಂದ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದೆ. ಹಾಗಾಗಿ ಬಿಬಿಎಂಪಿ ತ್ಯಾಜ್ಯ ಸಂಸ್ಕರಣೆ ಮಾಡುವ ಎಂಎಸ್ಜಿಪಿ ಘಟಕವನ್ನ ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಧರಣಿಗೆ ಪೂರ್ವಭಾವಿಯಾಗಿ ಸೋಮವಾರ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರು ಹಾಗು ನವ ಬೆಂಗಳೂರು ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ವಿ ಸತ್ಯ ಪ್ರಕಾಶ್ (ಸಾರಥಿ), ಸಂಸ್ಥಾಪಕ ಅಧ್ಯಕ್ಷ ಜಿ. ಏನ್ ಪ್ರದೀಪ್ ಮತ್ತು ಭಕ್ತರ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಗ್ರಾಮಸ್ಥರೊಂದಿಗೆ ಭಕ್ತರಹಳ್ಳಿ ವ್ಯಾಪ್ತಿಯ ಎಂಎಸ್ಜಿಪಿ ಘಟಕಕ್ಕೆ ಭೇಟಿ ನೀಡಿ ಘಟಕ ಮುಚ್ಚುವಂತೆ ಆಗ್ರಹಿಸಿದರು.
ಈ ಕಸ ವಿಲೇವಾರಿ ಘಟಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಷಪೂರಿತ ಗಾಳಿಯನ್ನು ಹರಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ವಿ ಸತ್ಯಪ್ರಕಾಶ್, ಈ ಕಸ ವಿಲೇವಾರಿ ಘಟಕ ಸುತ್ತಮುತ್ತಲಿನ ಗ್ರಾಮಗಳಿಗೆ ಮಾರಕವಾಗಿದೆ. ಈ ಕುರಿತಾಗಿ ಹಲವು ಬಾರಿ ನಾವು ಮನವಿ ಸಲ್ಲಿಸಿ, ರಾಜಕೀಯ ನಾಯಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.