ಬೆಂಗಳೂರು:ನವದೆಹಲಿ ಪ್ರವಾಸ (CM Basavaraj Bommai Delhi Tour) ಯಶಸ್ವಿಯಾಗಿದ್ದು, ಸಂತೃಪ್ತಿ ಮತ್ತು ಸಂತೋಷ ಆಗಿದೆ. ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುವ ಉತ್ಸಾಹ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದೆಹಲಿಯಿಂದ ವಾಪಸ್ಸಾದ ನಂತರ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಪ್ರವಾಸ ಯಶಸ್ವಿಯಾಗಿದೆ, ನಮ್ಮ ರಾಜ್ಯಕ್ಕೆ ಬೇಕಾಗಿರುವ ಕಲ್ಲಿದ್ದಲಿನ ಬಗ್ಗೆ ಮಾತುಕತೆ ನಡೆಸಿದ್ದೇನೆ. ಒರಿಸ್ಸಾದಲ್ಲಿ ನಮಗೆ ಮಂಜೂರಾಗಿರುವ ಮಂದಾಕಿನಿ ಗಣಿ ಬಳಕೆಗೆ ಅನುಮತಿ ಸಿಕ್ಕಿದೆ, ಅದೇ ರೀತಿ ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಕಲ್ಲಿದ್ದಲು ಕೊಡಲು ಒಪ್ಪಿಗೆ ಸಿಕ್ಕಿದೆ. ಹಾಗಾಗಿ ನಮಗೆ ಕಲ್ಲಿದ್ದಲು ಸಮಸ್ಯೆ ಆಗುವುದಿಲ್ಲ ಎಂದರು.
ಕೇಂದ್ರದ ಆಹಾರ ಇಲಾಖೆಯಿಂದ ರಾಜ್ಯಕ್ಕೆ 2100 ಕೋಟಿ ಬಾಕಿ ಬರಬೇಕಿದ್ದು, ಈ ಬಗ್ಗೆ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯೆಲ್ ಜೊತೆ ಮಾತುಕತೆ ನಡೆಸಿದ್ದು, ಬಾಕಿ ಹಣ ನೀಡಲು ಒಪ್ಪಿಗೆ ನೀಡಿದ್ದಾರೆ. ಇದು ಬಹಳ ಅನುಕೂಲವಾಗಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಭೇಟಿಯಾಗಿದ್ದೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಅವರನ್ನು ಭೇಟಿಯಾಗಿದ್ದೇನೆ. ನಮ್ಮ ಪ್ರವಾಸ ಬಹಳ ಯಶಸ್ವಿಯಾಗಿದೆ. ನೂರು ದಿನದ ಆಡಳಿತದ ನಿರ್ಣಯಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಲವಾರು ಕಾರ್ಯಕ್ರಮಗಳ ಬಗ್ಗೆ ವಿವರವನ್ನು ಮೋದಿ ಪಡೆದುಕೊಂಡಿದ್ದಾರೆ. ಗುತ್ತಿಗೆ ಕುರಿತು ಪಾರದರ್ಶಕ ಕಾಯ್ದೆ ಮಾಡಿದ್ದೇವೆ. ಅದನ್ನು ಇತರರ ರಾಜ್ಯಗಳಿಗೆ ಅಳವಡಿಸುವ ಕುರಿತು ಮಾತುಕತೆ ನಡೆಸಲಾಗಿದೆ. ಬಹಳ ಒಳ್ಳೆಯ ಚರ್ಚೆಯಾಗಿದೆ. ನಡ್ಡಾ ಮತ್ತು ಅಮಿತ್ ಶಾ ಜೊತೆಯಲ್ಲೂ ಉತ್ತಮವಾಗಿ ಚರ್ಚೆಯಾಗಿದೆ. ಬಹಳ ಸಂತೃಪ್ತಿ ಮತ್ತು ಸಂತೋಷ ಇದೆ. ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಮತ್ತು ಜನಪರವಾದ ಕೆಲಸ ಮಾಡುವ ವಿಶ್ವಾಸ ಈ ಪ್ರವಾಸದಲ್ಲಿ ಪಡೆದುಕೊಂಡಿದ್ದೇನೆ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ; ಬಿಟ್ ಕಾಯಿನ್ ಹಗರಣದ ಕುರಿತು ನಮೋಗೆ ಮಾಹಿತಿ?