ಬೆಂಗಳೂರು:ಕಬ್ಬಿಗೆ ಎಫ್ಆರ್ಪಿ ಕೊಡುವ ವಿಚಾರ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ಚರ್ಚಿಸಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗದ ನೇತೃತ್ವವನ್ನು ರಾಜ್ಯಸಭೆ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ವಹಿಸಿದ್ದರು. ಕಬ್ಬಿಗೆ ಎಫ್ಆರ್ಪಿ ದರ ನಿಗದಿ ಮಾಡುವಂತೆ ಮನವಿ ಮಾಡಲಾಯಿತು. ನಿಯೋಗದಲ್ಲಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಮಂಡ್ಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜೋಗಿ ಗೌಡ, ರೈತ ಮುಖಂಡ ಹೆಚ್.ಎನ್. ಮಂಜುನಾಥ್, ಮುನಿರಾಜುಗೌಡ ಮತ್ತಿತರರು ಇದ್ದರು.
ಸಕ್ಕರೆ ಸಚಿವರನ್ನು ಭೇಟಿಯಾದ ಬಿಜೆಪಿ ನಿಯೋಗ ಸಕ್ಕರೆ ಸಚಿವ ಅರೆಬೈಲು ಶಿವರಾಂ ಹೆಬ್ಬಾರ್ ಜೊತೆಗಿನ ಬಿಜೆಪಿ ನಿಯೋಗದ ಭೇಟಿ ಮುಕ್ತಾಯದ ಬಳಿಕ ಮಾತನಾಡಿದ ಈರಣ್ಣ ಕಡಾಡಿ, ಇಂದು ಬಿಜೆಪಿ ನಿಯೋಗ ಸಕ್ಕರೆ ಸಚಿವರನ್ನು ಭೇಟಿ ಮಾಡಿದೆ. ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿಯನ್ನು ಸಚಿವರ ಗಮನಕ್ಕೆ ತರಲಾಗಿದೆ. ಸಚಿವರ ಬಳಿ ಕೂಡ ಅಂಕಿ-ಅಂಶಗಳು ಇವೆ. ಈಗಾಗಲೇ ಶೇ.96 ರಷ್ಟು ಬಾಕಿ ಮೊತ್ತ ನೀಡಲಾಗಿದ್ದು, ಶೇ.4 ರಷ್ಟು ಮಾತ್ರ ಬಾಕಿ ನೀಡಬೇಕಿದೆ. ಇದನ್ನು ಆದಷ್ಟು ಬೇಗ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಇನ್ನು ಎಫ್ಆರ್ಪಿ ದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಲಿದೆ. 2020-21ರ ವರ್ಷಕ್ಕೆ ಸೂಕ್ತ ಎಫ್ಆರ್ಪಿ ದರ ನಿಗದಿಯಾಗುವ ನಿರೀಕ್ಷೆಯಿದೆ. ಇಂದು ಸಂಜೆಯೊಳಗೆ ಕೇಂದ್ರ ಸರ್ಕಾರ ಎಫ್ಆರ್ಪಿ ದರವನ್ನು ನಿಗದಿಪಡಿಸಿ ಆದೇಶಿಸಲಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿಯನ್ನು ಹೊರಡಿಸುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ.
ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಸಭೆಯಲ್ಲಿ ನಡೆದದ್ದೇನು?
ಮಂಡ್ಯದ ಮೈ ಶುಗರ್ಸ್ ಕಾರ್ಖಾನೆ ಮುಂದಿನ ಒಂದೂವರೆ ತಿಂಗಳಲ್ಲಿ ಕಾರ್ಯಾರಂಭವಾಗಲಿದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ನಿಯೋಗದಲ್ಲಿದ್ದ ರೈತರಿಗೆ ಅರೆಬೈಲು ಶಿವರಾಂ ಹೆಬ್ಬಾರ್ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಸಭೆಯಲ್ಲಿ ಅವರು ಆದಷ್ಟು ಬೇಗನೆ ಅಗ್ರಿಮೆಂಟ್ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದಾರೆ. ಮಂಡ್ಯ ಮೈ ಶುಗರ್ಸ್ ಕಾರ್ಖಾನೆಯನ್ನು ತೆರೆಯಲೇಬೇಕು. ಹೀಗಾಗಿ, ಕಾರ್ಖಾನೆಯ ಜೊತೆಗೆ ಒಡಂಬಡಿಕೆ ಮಾಡಿ ಕೊಡುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ.