ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಸದಸ್ಯರುಗಳ ಅಪ್ರತಿಮ ಸಾಧನೆ ಹಾಗೂ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡಲು ಪ್ರತಿವರ್ಷವೂ ಒಬ್ಬ ಸದಸ್ಯರಿಗೆ “ಅತ್ಯುತ್ತಮ ಶಾಸಕ ಪ್ರಶಸ್ತಿ " ನೀಡಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಅನುಸರಿಸಲಾಗುವ ಮಾರ್ಗಸೂಚಿಗಳನ್ನು ಸದಸ್ಯರುಗಳ ಮಾಹಿತಿಗಾಗಿ ಕಳುಹಿಸಲಾಗುತ್ತಿದೆ. ನಮ್ಮ ಸಂವಿಧಾನದಲ್ಲಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಪೈಕಿ ವೈಚಾರಿಕವಾಗಿ ಶಾಸಕಾಂಗವು ಬಹಳ ಪ್ರಮುಖವೆನಿಸಿಕೊಳ್ಳುತ್ತದೆ. ಸಂಸತ್ತು ಮತ್ತು ವಿಧಾನಮಂಡಲಗಳಲ್ಲಿ ಪ್ರತಿನಿಧಿಗಳು ಜನರಿಂದ ನೇರವಾಗಿ ಆಯ್ಕೆಯಾಗಿ ಬರುವುದರಿಂದ ಅವರುಗಳಿಗೆ ಸಾಮಾನ್ಯ ಜನರ ಹಾಗೂ ಸಮಾಜದ ಎಲ್ಲಾ ಆಗು ಹೋಗುಗಳ ಅರಿವಿರುತ್ತದೆ. ಮತ್ತು ಅವರುಗಳು ಜನರ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದು, ಅದನ್ನು ಪರಿಹರಿಸಲು ಉತ್ತಮವಾದ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಕಾರ್ಯಾಂಗದ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಕರಿಸುತ್ತಾರೆ.
ಮಹತ್ತರ ಕಾರ್ಯಗಳನ್ನು ನಿರ್ವಹಿಸುವ ಜನಪ್ರತಿನಿಧಿಗಳ ಪರಿಶ್ರಮ ಹಾಗೂ ಪ್ರತಿಭೆಗಳನ್ನು ಗುರುತಿಸಿದ್ದು, ಇದರಿಂದ ಪ್ರೋತ್ಸಾಹಗೊಂಡು ಇಂದಿನ ಪೀಳಿಗೆಯಲ್ಲಿ ಇನ್ನೂ ಉತ್ತಮ ಜನಪ್ರತಿನಿಧಿಗಳು ಹೊರಹೊಮ್ಮುತ್ತಾರೆ. ಇಂತಹ ಮಹತ್ತರ ಉದ್ದೇಶದಿಂದ ಭಾರತದ ಸಂಸತ್ತಿನ ಉಭಯ ಸದನಗಳಾದ ರಾಜ್ಯ ಸಭೆ ಮತ್ತು ಲೋಕಸಭೆ ತನ್ನ ಹಾಲಿ ಸದಸ್ಯರುಗಳ ಅಸಾಧಾರಣ ಸಾಧನೆಯನ್ನು ಗುರುತಿಸಿ 1995ರಿಂದ “ಅಸಾಧಾರಣ ಸಂಸದೀಯ ಪಟು” ಪ್ರಶಸ್ತಿಯನ್ನು ನೀಡುತ್ತಾ ಬಂದಿವೆ.
ಅಸ್ಸಾಂ, ರಾಜಸ್ಥಾನ, ಜಾರ್ಖಂಡ್, ಉತ್ತರಖಂಡ್, ಗುಜರಾತ್ ಮುಂತಾದ ಹಲವು ರಾಜ್ಯಗಳಲ್ಲೂ ಸಹ ವಿಧಾನಸಭೆಯ ಸದಸ್ಯರುಗಳಿಗೆ “ಅತ್ಯುತ್ತಮ ಶಾಸಕ" ಎಂಬ ಪ್ರಶಸ್ತಿಯನ್ನು ನೀಡುತ್ತಿವೆ. ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ನಡೆದ 79ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ವಿಧಾನಮಂಡಲಗಳಲ್ಲಿ ಚರ್ಚೆಗಳ ಗುಣಮಟ್ಟವನ್ನು ವೃದ್ಧಿಸಲು, ಸದಸ್ಯರು ಸದನದ ನಿಯಮಗಳು, ಕಾರ್ಯವಿಧಾನ ಹಾಗೂ ಚರ್ಚಿಸುವ ಸಾಮರ್ಥ್ಯ ಇತ್ಯಾದಿಗಳನ್ನು ಪರಿಗಣಿಸಿ ಸಂಸತ್ತಿನಲ್ಲಿ ವರ್ಷಕ್ಕೊಮ್ಮೆ ನೀಡಲಾಗುತ್ತಿರುವ “ಅತ್ಯುತ್ತಮ ಸಂಸದೀಯ ಪಟು” ಎಂಬ ಪ್ರಶಸ್ತಿಯನ್ನು ಎಲ್ಲಾ ರಾಜ್ಯಗಳಲ್ಲೂ ನೀಡುವುದು ಅವಶ್ಯಕವೆಂಬ ಒಮ್ಮತದ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ.
ನಮ್ಮ ರಾಜ್ಯದಲ್ಲಿಯೂ ಸಹ ಈ ಹಿಂದಿನ ಕೆಲವೊಂದು ವಿಧಾನಸಭಾ ಅವಧಿಗಳಲ್ಲಿ ಇಂತಹ ಪ್ರಶಸ್ತಿಯನ್ನು ಸದಸ್ಯರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯುತ್ತಮವಾಗಿ ಮತ್ತು ಕ್ರಮಬದ್ಧವಾಗಿ ಶಾಸನ ಸಭೆಗಳನ್ನು ನಡೆಸುತ್ತದೆಯೆಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕ ರಾಜ್ಯದಲ್ಲಿಯೂ ಸಹ ಸಭಾಧ್ಯಕ್ಷರು ಕರ್ನಾಟಕ ವಿಧಾನ ಸಭೆಯಲ್ಲಿ ಪ್ರತಿವರ್ಷ ಸದಸ್ಯರೊಬ್ಬರಿಗೆ “ಅತ್ಯುತ್ತಮ ಸಂಸದೀಯ ಪಟು” ಅಥವಾ “ಅತ್ಯುತ್ತಮ ಶಾಸಕ” ಎಂಬ ಪ್ರಶಸ್ತಿ ನೀಡುವುದು ಅವಶ್ಯಕವೆಂದು ಪರಿಗಣಿಸಿ, ಪ್ರಶಸ್ತಿಯ ಮಾರ್ಗಸೂಚಿಯನ್ನು ಅಂಗೀಕರಿಸಲಾಗಿದೆ.
"ಅತ್ಯುತ್ತಮ ಶಾಸಕ ಪ್ರಶಸ್ತಿ" ಆಯ್ಕೆ ಕುರಿತು ಮಾರ್ಗಸೂಚಿ :
1. ವಿಧಾನಸಭಾ ಸದಸ್ಯರು ಸಾರ್ವಜನಿಕ ಜೀವನದಲ್ಲಿ ಶಾಸಕರಾಗಿ ಮತಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಪರಿಗಣನೆ.
2. ತಮ್ಮ ಮತಕ್ಷೇತ್ರಗಳಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿ ಗಳಿಸಿರುವ ಅನುಭವದ ಪರಿಗಣನೆ.
3. ಸದನದಲ್ಲಿ ನಡೆಯುವ ಚರ್ಚೆಗಳಲ್ಲಿ ಸದಸ್ಯರು ತೋರಿಸುವ ಕೌಶಲ್ಯ
4. ಸಾರ್ವಜನಿಕ ಹಿತಾಸಕ್ತಿ ಇರುವಂತಹ ವಿಷಯಗಳ ಬಗ್ಗೆ ಸದಸ್ಯರಿಗೆ ಇರುವ ಆಸಕ್ತಿ.
5. ಸದನದಲ್ಲಿ ಸದಸ್ಯರು ಪ್ರಸ್ತಾಪಿಸುವ ವಿಷಯ ಹಾಗೂ ಅದರ ಗಂಭೀರತೆಯ ಪರಿಗಣನೆ.
6. ಸದನದಲ್ಲಿ ವಿಷಯಗಳನ್ನು ಪ್ರಸ್ತುತ ಪಡಿಸುವ ವಿಧಾನ ಹಾಗೂ ಸದನದ ಸಂಪ್ರದಾಯಗಳ ಬಗ್ಗೆ ಅವರಿಗೆ ಇರುವ ಮನೋಭಾವನೆ.
7. ಕನ್ನಡ ಭಾಷೆಯಲ್ಲಿ ಹೊಂದಿರುವ ಪಾಂಡಿತ್ಯ.
8. ಸದನದ ಒಳಗೆ ಹಾಗೂ ಹೊರಗೆ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳ ಅರಿವು ಮತ್ತು ಅವುಗಳ ಪಾಲನೆ.