ಬೆಂಗಳೂರು: ರಾಜ್ಯದ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ಪ್ರತಿದಿನ ಬೆಳಗಿನ ಜಾವ 5 ಗಂಟೆಯ ಬದಲಾಗಿ 6 ಗಂಟೆಗೆ ಅಜಾನ್ ಕೂಗಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನೀಡಿರುವ ಆದೇಶ ಮತ್ತು ಮಾರ್ಗಸೂಚಿಗಳನ್ನು ಪಾಲಿಸಲು ಮುಸ್ಲಿಂ ಧರ್ಮಗುರುಗಳು, ಮೌಲ್ವಿಗಳು ಮತ್ತು ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಅಮೀರ್-ಎ-ಷರಿಯತ್ ಆಗಿರುವ ಮೌಲಾನ ಸಗೀರ್ ಅಹಮದ್ ಅಧ್ಯಕ್ಷತೆಯಲ್ಲಿ ಷರಿಯತ್-ಎ-ಹಿಂದ್ ಸಂಘಟನೆ ಏರ್ಪಡಿಸಿದ್ದ ಸಭೆಯಲ್ಲಿ ಒಮ್ಮತದ ತೀರ್ಮಾನ ಮೂಡಿದೆ. ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನ ರಾಜ್ಯದ ಎಲ್ಲ ಭಾಗಗಳಿಗೂ ಅನ್ವಯವಾಗಲಿದೆ. ಎಲ್ಲ ಮಸೀದಿಗಳ ಮುಖಂಡರೂ ಕೂಡ ಒಪ್ಪಿಗೆ ನೀಡಿದ್ದಾರೆ. ಇದಕ್ಕೆ ಯಾರ ವಿರೋಧವೂ ವ್ಯಕ್ತವಾಗಿಲ್ಲ. ಉಳಿದ ಸಮಯದಲ್ಲಿ ಸರ್ಕಾರ ಮತ್ತು ಸುಪ್ರೀಂಕೋರ್ಟ್ ತೀರ್ಮಾನವನ್ನು ಚಾಚೂ ತಪ್ಪದೇ ಪಾಲಿಸಲು ನಿರ್ಧರಿಸಿದ್ದೇವೆ ಎಂದು ಸಭೆ ಬಳಿಕ ಸಂಘಟನೆಯ ಉಮರ್ ಶರೀಫ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.