ಬೆಂಗಳೂರು:ನಗರದಲ್ಲಿ ಕೋವಿಡ್ ರೋಗಿಗಳು ಮೃತಪಡಲು ಕಾರಣ ಏನೆಂದು ತಿಳಿಯಲು ಬಿಬಿಎಂಪಿ ಮರಣ ಪ್ರಕರಣಗಳ ಪರಿಶೀಲನೆ (ಡೆತ್ ಆಡಿಟ್) ನಡೆಸಿದೆ. ಅದರ ಪ್ರಕಾರ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಹಾಸಿಗೆಗಳ ಕೊರತೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವು ಸಂಭವಿಸಿರುವುದು ಹೆಚ್ಚು. ಹಾಗೆಯೇ ಸೋಂಕಿತರು ತೀರಾ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹಾಗೂ ಕೆಲ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಧೋರಣೆ ಕೂಡ ಸೇರಿದೆ.
ನಗರದಲ್ಲಿ ಕೋವಿಡ್ನಿಂದ ಮೃತಪಟ್ಟಿರುವವರ ಸಂಖ್ಯೆ 3 ಸಾವಿರ ದಾಟಿದೆ. ಆದರೆ, 2,936 ಮಂದಿ ಮೃತಪಟ್ಟವರ ವರದಿಗಳನ್ನು ಮಾತ್ರ ಡೆತ್ ಆಡಿಟ್ ನಡೆಸಲಾಗಿದೆ. ಈ ಪ್ರಕರಣಗಳ ಪೈಕಿ 620 ಮಂದಿ ಯಾವುದೇ ಕಾಯಿಲೆ ಇಲ್ಲದೇ, ಬರಿ ಸೋಂಕು ತಗುಲಿ ಬಲಿಯಾಗಿದ್ದಾರೆ. ಉಳಿದ ಮೃತಪಟ್ಟ (2,316) ಸೋಂಕಿತರು ಅನ್ಯ ಕಾಯಿಲೆಯಿಂದ ಬಳಲುತ್ತಿದ್ದರು.
ಅದರಲ್ಲಿ 1,800 ಮಂದಿ 51-75 ವರ್ಷದವರು, 600 ಮಂದಿ 26 - 50 ವರ್ಷದವರು ಮೃತಪಟ್ಟಿದ್ದಾರೆ. ಇನ್ನು ಕೋವಿಡ್ನ ಜೀವನ್ಮರಣದ ಹೋರಾಟದಲ್ಲಿ 315 ಮಂದಿ ಆಸ್ಪತ್ರೆಗೆ ಸೇರಿದ 24 ಗಂಟೆಯೊಳಗೆ ಮೃತಪಟ್ಟರೆ, 414 ಮಂದಿ 48 ಗಂಟೆಯೊಳಗೆ, 2,043 ಮಂದಿ ನಾಲ್ಕು ದಿನಕ್ಕಿಂತ ಹೆಚ್ಚು ದಿನ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಲಾಕ್ಡೌನ್ ಸಡಿಲಿಸಿದ ಬಳಿಕ ಸಾವಿನ ಪ್ರಮಾಣ ಏರಿಕೆ ಕಂಡಿದೆ. ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಪಾಲಿಸದಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ.