ಬೆಂಗಳೂರು :ಐಟಿ-ಬಿಟಿ, ತಂತ್ರಜ್ಞಾನ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಕೆಲವೇ ವರ್ಷಗಳಲ್ಲಿ ಕೃಷಿ, ಕೈಗಾರಿಕೆ, ಸೇವೆ ಮತ್ತು ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ನಂ.1 ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಇಂದು ಸಿಎಂಆರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವರ್ಚುಯಲ್ ವೇದಿಕೆ ಮೂಲಕ ಭಾಷಣ ಮಾಡಿದ ಅವರು, ಅತ್ಯಂತ ದೂರದೃಷ್ಟಿಯಿಂದ ರೂಪಿಸಲ್ಪಟ್ಟಿರುವ ಶಿಕ್ಷಣ ನೀತಿಯು ಭಾರತಕ್ಕೆ ಹೊಸ ದಿಕ್ಕು ತೋರಲಿದೆ. ಮುಖ್ಯವಾಗಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭ ತಂದು ಕೊಡಲಿದೆ. ನೀತಿಯ ಕರಡು ಸಮಿತಿಯಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದರು.
ಸದ್ಯಕ್ಕೆ ಕರ್ನಾಟಕವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಸಂಶೋಧನೆ ಸೇರಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಸಾಂಪ್ರದಾಯಿಕ ಹಾಗೂ ಅಕಾಡೆಮಿಕ್ ಆಧಾರಿತ ಶಿಕ್ಷಣದ ಸ್ವರೂಪವು ಅಮೂಲಾಗ್ರವಾಗಿ ಬದಲಾಗಲಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಕೈಗಾರಿಕೆ, ಕೃಷಿ, ತೋಟಗಾರಿಕೆ, ನೀರಾವರಿ, ಆರೋಗ್ಯ ಸೇವೆ, ಸಾರಿಗೆ ಸೇರಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಅಚ್ಚರಿಯ ರೀತಿ ಅಭಿವೃದ್ಧಿ ಹೊಂದಲಿದೆ.