ಬೆಂಗಳೂರು:ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ವಶದಲ್ಲಿರುವ ಬೆಡ್ ದರ ಪರಿಷ್ಕರಣೆ, ಕೂಡಲೇ 5 ಲಕ್ಷ ರೆಮ್ಡೆಸಿವಿರ್ ಡೋಸ್ ಖರೀದಿ ಹಾಗೂ ಅಗತ್ಯವಿದ್ದಷ್ಟು ರಾಟ್ ಕಿಟ್‌ಗಳನ್ನು ತಕ್ಷಣವೇ ಖರೀದಿ ಮಾಡುವ ಮಹತ್ವದ ನಿರ್ಧಾರಗಳನ್ನು ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಕೈಗೊಳ್ಳಲಾಗಿದೆ.
ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಇಂದು ವಿಧಾನಸೌಧದಲ್ಲಿ ಕಾರ್ಯಪಡೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರು, ದೇಶಿಯ ಅಥವಾ ಜಾಗತಿಕವಾಗಿ ಯಾವುದೇ ಕಂಪನಿ ಆಗಿರಲಿ. ಇವತ್ತೇ ರೆಮ್ಡೆಸಿವಿರ್ ಖರೀದಿಗೆ ಜಾಗತಿಕ ಟೆಂಡರ್ ಕರೆಯಿರಿ ಎಂದು ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೆಮ್ಡೆಸಿವಿರ್ ಕೊರತೆ ಆಗಬಾರದು:
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ರೆಮ್ಡೆಸಿವಿರ್ ಕೊರತೆ ಉಂಟಾಗಬಾರದು. ಕೂಡಲೇ 5 ಲಕ್ಷ ಡೋಸ್ ಆಮದು ಮಾಡಲು ಜಾಗತಿಕ ಟೆಂಡರ್ ಕರೆಯಿರಿ. ಯಾವುದೇ ಕಂಪನಿಯಾದರೂ ಪರವಾಗಿಲ್ಲ. ವಿದೇಶದಿಂದ ಆಮದು ಮಾಡಿಕೊಂಡರೂ ಸರಿ. ರೆಮ್ಡೆಸಿವಿರ್ ಕೊರತೆಯಿಂದ ಜೀವ ಹೋಯಿತು ಎನ್ನುವ ಮಾತು ಇನ್ನು ಕೇಳಿರಬಾರದು. ಇವತ್ತೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಎಂದು ಡಿಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಖಾಸಗಿ ಆಸ್ಪತ್ರೆಗಳ ಸರ್ಕಾರದ ಬೆಡ್ ದರ ಪರಿಷ್ಕರಣೆ :
ಇದೇ ಸಭೆಯಲ್ಲಿ ಸರ್ಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಿರುವ ಹಾಸಿಗೆಗಳ ಪ್ರತಿದಿನದ ದರವನ್ನು ಪರಿಷ್ಕರಣೆ ಮಾಡುವ ನಿರ್ಧಾರವನ್ನೂ ಕೈಗೊಳ್ಳಲಾಯಿತು. ಗಂಭೀರವಲ್ಲದ ಕೋವಿಡ್ ಸೋಂಕಿತರ ಬೆಡ್ ದರ ಪ್ರತಿದಿನಕ್ಕೆ ಈಗ 5,200 ರೂ. ಇದ್ದು, ಇದರಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಆಕ್ಸಿಜನಕ ಯುಕ್ತ ಬೆಡ್ ದರವನ್ನು ದಿನಕ್ಕೆ 7,000 ದಿಂದ 8,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಐಸಿಯುನಲ್ಲಿ ವೆಂಟಿಲೇಟರ್ ಹೊರತಾದ ಬೆಡ್ ದರವನ್ನು 8,500ರಿಂದ 9,750 ರೂ.ಗಳಿಗೆ ಹಾಗೂ ಐಸಿಯುನಲ್ಲಿ ವೆಂಟಿಲೇಟರ್ ಸಹಿತ ಬೆಡ್ ದರವನ್ನು 10,000ರಿಂದ 11,500 ರೂ.ಗಳಿಗೆ ಏರಿಸಲಾಗಿದೆ. ಹೊಸ ದರಗಳು ಯಾವಾಗಿನಿಂದ ಜಾರಿಗೆ ಬರುತ್ತವೆ ಎಂಬುದಕ್ಕೆ ಸರಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಡಿಸಿಎಂ ಸಭೆಯಲ್ಲಿ ಪ್ರಕಟಿಸಿದರು.
ಹೆಚ್ಚು ವಸೂಲಿ ಮಾಡಿದರೆ ಗೂಂಡಾ ಕಾಯ್ದೆಯಡಿ ಕ್ರಮ:
ಯಾವುದೇ ಖಾಸಗಿ ಆಸ್ಪತ್ರೆ ಬೆಡ್, ಔಷಧ, ಆಕ್ಸಿಜನ್, ರೆಮ್ಡೆಸಿವಿರ್ ಸೇರಿದಂತೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಗೂಂಡಾ ಕಾಯ್ದೆ ಅಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.