ಬೆಂಗಳೂರು:ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರ ಮಧ್ಯೆ ವಾಗ್ವಾದ ನಡೆದಿದೆ. ಸಚಿವ ಮಾಧುಸ್ವಾಮಿ ಹಾಗೂ ಎಸ್.ಟಿ.ಸೋಮಶೇಖರ್ ಮಧ್ಯೆ ತಿಕ್ಕಾಟವಾಗಿದ್ದು, ಸಹಕಾರ ಸಂಘದ ಸಾಲ ಮರಪಾವತಿಗೆ ನೋಟಿಸ್ ನೀಡುತ್ತಿರುವ ಬಗ್ಗೆ ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಹಿರಿಯ ಸಚಿವರಿಬ್ಬರ ವಾಗ್ವಾದ! - ಸಚಿವ ಸಂಪುಟ ಸಭೆ
ಸಹಕಾರ ಸಂಘದ ಸಾಲ ಮರುಪಾವತಿಗೆ ನೋಟಿಸ್ ನೀಡುತ್ತಿರುವ ವಿಚಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಾದ ಮಾಧುಸ್ವಾಮಿ ಹಾಗೂ ಎಸ್.ಟಿ.ಸೋಮಶೇಖರ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದು ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಲ ನೀಡಲಾಗಿತ್ತು. ಸುಮಾರು 139 ಕೋಟಿ ರೂಪಾಯಿ ಸಹಕಾರ ಸಂಘದ ಸಾಲ ಬಾಕಿ ಸರ್ಕಾರ ಮರುಪಾವತಿ ಮಾಡಿತ್ತು. ಆದರೂ ಸಾಲ ವಸೂಲಿಗೆ ಡಿಸಿಸಿ ಬ್ಯಾಂಕ್ ಮುಂದಾಗಿದ್ದು, ಡಿಸಿಸಿ ಬ್ಯಾಂಕ್ ಕ್ರಮಕ್ಕೆ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಪರಿಸ್ಥಿತಿ ಸರಿಯಿಲ್ಲ. ಡಿಸಿಸಿ ಬ್ಯಾಂಕ್‌ಗೆ ನೋಟಿಸ್ ಕೊಡುವುದು ಸರಿಯಲ್ಲ. ರೈತರಿಂದ ವಸೂಲಾತಿಗೆ ಮುಂದಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈಗ ಸದ್ಯ ಸಾಲ ವಸೂಲಾತಿ ಕೈಬಿಡಿ ಎಂದು ಮಾಧುಸ್ವಾಮಿ ಒತ್ತಾಯಿಸಿದರು. ಇವರ ಮಾತಿಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮಜಾಯಿಷಿ ನೀಡಲು ಮುಂದಾದರು. ಆದರೆ ಅವರ ಉತ್ತರಕ್ಕೆ ಮಾಧುಸ್ವಾಮಿ ಸಮಾಧಾನಗೊಳ್ಳಲಿಲ್ಲ. ಈ ವೇಳೆ ಇಬ್ಬರ ನಡುವಣ ವಾಗ್ವಾದ ನಡೆದಿದೆ.
ವರ್ಗಾವಣೆ ವಿಚಾರವಾಗಿ ಸಿಎಂ ಗರಂ
ಸಂಪುಟ ಸಭೆಯಲ್ಲಿ ಸಾಮಾನ್ಯ ವರ್ಗಾವಣೆ ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಗರಂ ಆದ ಘಟನೆಯೂ ನಡೆದಿದೆ. ಸಾರ್ವಜನಿಕ ವರ್ಗಾವಣೆ ವಿಚಾರವಾಗಿ ಇಲಾಖೆ ಸಚಿವರಿಗೆ ಅವಕಾಶ ಕೊಡಿ ಎಂದು ಸಿಎಂ ಮುಂದೆ ಸಚಿವ ಅರವಿಂದ ಲಿಂಬಾವಳಿ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಕೆಲ ಸಚಿವರೂ ಧ್ವನಿಗೂಡಿಸಿದ್ದಾರೆ. ಆದರೆ, ಅರಣ್ಯ ಸಚಿವರ ಬೇಡಿಕೆಗೆ ಯಡಿಯೂರಪ್ಪ ಗರಂ ಆಗಿದ್ದಾರೆ. ಅದಕ್ಕೆಲ್ಲಾ ಅವಕಾಶವಿಲ್ಲ. ವರ್ಗಾವಣೆ ಪ್ರಸ್ತಾಪವಿದ್ದರೆ ನನ್ನ ಬಳಿ ತನ್ನಿ, ನಾನೇ ಮಾಡುತ್ತೇನೆ ಎಂದು ಸಿಎಂ ತಿಳಿಸಿದರು.
ಜೂನ್ -ಜುಲೈ ತಿಂಗಳಲ್ಲಿ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ. ವಿಧಾನ ಸಭೆಯಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದುಕೊಂಡು ವರ್ಗಾವಣೆ ಮಾಡಲಾಗುತ್ತಿತ್ತು. ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು.